ಕನ್ನಡಪ್ರಭ ವಾರ್ತೆ ಯಳಂದೂರು

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಗೆ ಜೂ.30ರಿಂದಲೇ ಚಾಲನೆ ದೊರಕಿದೆ. ಇದನ್ನು ಪ್ರತಿಯೊಬ್ಬ ವಯಸ್ಕ ಮತದಾರರು ಮಾಡಿಸಿಕೊಳ್ಳಲೇಬೇಕು. ಇದಕ್ಕಾಗಿ ಕಾಂಗ್ರೆಸ್ ಪಕ್ಷದಿಂದಲೂ ಪ್ರತಿಯೊಂದು ಬೂತ್‌ಗೂ ಬಿಎಲ್‌ಒಗಳನ್ನು ಆಯ್ಕೆ ಮಾಡಲಾಗಿದ್ದು ಇದಕ್ಕೆ ನೇಮಕಗೊಂಡಿರುವರು ಈ ಪ್ರಕ್ರಿಯೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ನೀಡಿದರು.

ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಎಸ್‌ಐಆರ್ ವಾರ್‌ರೂಂಗೆ ಚಾಲನೆ ನೀಡಿ ಮಾತನಾಡಿದರು. ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದು ವಾರ್ ರೂಂ ತೆರೆಯಲು ಸೂಚನೆ ನೀಡಲಾಗಿದೆ. ಇದರಂತೆ ಕೊಳ್ಳೇಗಾಲ ಕ್ಷೇತ್ರದಲ್ಲೂ ಕೂಡ ಇದನ್ನು ತೆರೆಯಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬರುವ ಪ್ರತಿಯೊಂದು ಪ್ರಶ್ನೆಗಳಿಗೂ ಇಲ್ಲಿ ಉತ್ತರ ಲಭ್ಯವಾಗಲಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 243 ಬೂತ್‌ಗಳಿವೆ. ಇದರಲ್ಲಿ 2,21,151 ಮತದಾರರರು ಕ್ಷೇತ್ರದಲ್ಲಿದ್ದಾರೆ. ಕಳೆದ 8 ದಿನಗಳ ಅವಧಿಯಲ್ಲಿ ಒಟ್ಟು 1,94,547 ಅರ್ಜಿಗಳನ್ನು ಮನೆಮನೆಗಳಿಗೆ ತೆರಳಿ ವಿತರಿಸಲಾಗಿದೆ. ಇದನ್ನು ಭರ್ತಿ ಮಾಡಿ ಒಂದು ಪ್ರತಿಯನ್ನು ತಮ್ಮಲ್ಲಿ ಇಟ್ಟುಕೊಂಡು ಮತ್ತೊಂದು ಪ್ರತಿಯನ್ನು ಬಿಎಲ್‌ಒಗಳಿಗೆ ನೀಡಬೇಕು. ನಂತರ ಇದನ್ನು ಕಂಪ್ಯೂಟರೀಕರಣ ಮಾಡಲಾಗುತ್ತದೆ. ನಮ್ಮ ಕ್ಷೇತ್ರದಲ್ಲಿ ಮಂಗಳವಾರದ ವರೆಗೆ 42,140 ಮತದಾರರು ಈ ಪ್ರಕ್ರಿಯೆಗೆ ಒಳಪಟ್ಟಿದ್ದು ಶೇ. 19.05 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇದಕ್ಕೆ ಇದೇ ತಿಂಗಳ 29 ಅಂತಿಮ ದಿನವಾಗಿದೆ. ಹಾಗಾಗಿ ಪ್ರತಿ ಮನೆಮನೆಗಳಿಗೆ ತೆರಳಿ ಈ ಕೆಲಸಕ್ಕೆ ಚುರುಕು ಮುಟ್ಟಿಸಲು ನೆರವಾಗಬೇಕು. ಆ ಮೂಲಕ ಮತದಾರರ ಮನಸ್ಸನ್ನು ಗೆಲ್ಲುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಮತದಾರರ ಪರಿಷ್ಕರಣೆ ರಾಜ್ಯಾದ್ಯಂತ ನಡೆಯುತ್ತಿದೆ. ಚುನಾವಣಾ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಇದು ಅವಶ್ಯಕವಾಗಿದೆ. ನಮ್ಮ ಹಕ್ಕನ್ನು ಚಲಾಯಿಸಲು ಈ ಗುರುತಿನ ಚೀಟಿ ನೆರವಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳಿಗೂ ಇದನ್ನೇ ಮಾನದಂಡವಾಗಿ ಇಟ್ಟುಕೊಳ್ಳಲಿದ್ದು ಪ್ರತಿಯೊಬ್ಬರೂ ತಪ್ಪದೆ ಈ ಎಸ್‌ಐಅರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದಕ್ಕೆ ಪೂರಕವಾದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಮಾಹಿತಿ ಕೊರತೆ ಇದ್ದು ನಮ್ಮ ಪಕ್ಷದಿಂದ ನಿಯುಕ್ತಿಗೊಂಡಿರುವ ಬಿಎಲ್‌ಎ ಗಳು ಮತದಾರರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಜೆ. ಯೋಗೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಅಸಂಘಟಿಕ ಕಾರ್ಮಿಕರ ಅಧ್ಯಕ್ಷ ದೇವರಾಜು, ಪಪಂ ಮಾಜಿ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ. ರವಿ, ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುಂಬಳ್ಳಿ ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಆರ್. ಪುಟ್ಟಬಸವಯ್ಯ ತಾಪಂ ಮಾಜಿ ಅಧ್ಯಕ್ಷ ನಿರಂಜನ್ ಸೇರಿದಂತೆ ಅನೇಕರು ಇದ್ದರು.


.