ಸಾರಾಂಶ
ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡದ ಕಾರಣ, ಸಮಾಜ ಸರಿ ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ದೈವತ್ವ ಮತ್ತು ಆಧ್ಯಾತ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುನ್ನಡೆಸುವುದೇ ನಮ್ಮ ಮೂಲ ಉದ್ದೇಶ. ಸ್ವಾರ್ಥವಿಲ್ಲದೆ ಕೆಲಸ ಮಾಡುವ, ಪ್ರತಿಫಲ ಬಯಸದೆ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಲು ಆಧ್ಯಾತ್ಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ.
ಕನ್ನಡಪ್ರಭ ವಾರ್ತೆ ಶಿರಾ
ಆಧ್ಯಾತ್ಮಿಕ ಚಿಂತನೆ ಮನುಷ್ಯನ ಜೀವನದ ನೆಮ್ಮದಿ ಬದುಕಿಗೆ ಹೊಸ ಸ್ವರೂಪ ನೀಡುತ್ತದೆ. ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡುವ, ಒಳ್ಳೆಯದನ್ನು ಬಯಸುವ ವ್ಯಕ್ತಿತ್ವದ ಜೊತೆ ಆಧ್ಯಾತ್ಮ ಸೇರಿದರೆ ಮನುಷ್ಯ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಎಂದು ಪೂಜಾರ ಮುದ್ದನಹಳ್ಳಿ ಶ್ರೀ ಶಿವಾನಂದ ಸಿದ್ಧಾರೂಢ ಆಶ್ರಮದ ಪೀಠಾಧ್ಯಕ್ಷ ಶ್ರೀ ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಅವರು ತಾಲೂಕಿನ ಚಿಕ್ಕ ಹುಲಿಕುಂಟೆ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯ ಭಾನುವಾರ ಆಯೋಜಿಸಿದ್ದ ಶಿವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸನ್ನು ಸೀಮಿತದಲ್ಲಿ ಇಟ್ಟುಕೊಂಡು, ಸಾಂಸಾರಿಕ ಜೀವನದಿಂದ ಉದ್ಧಾರದ ಕಡೆ ಮುನ್ನಡೆಯಲು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ರಾಜಯೋಗಿ ಬಿ.ಕೆ. ಶಾಂತಿ ಮಾತನಾಡಿ, ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡದ ಕಾರಣ, ಸಮಾಜ ಸರಿ ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ದೈವತ್ವ ಮತ್ತು ಆಧ್ಯಾತ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುನ್ನಡೆಸುವುದೇ ನಮ್ಮ ಮೂಲ ಉದ್ದೇಶ. ಸ್ವಾರ್ಥವಿಲ್ಲದೆ ಕೆಲಸ ಮಾಡುವ, ಪ್ರತಿಫಲ ಬಯಸದೆ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಲು ಆಧ್ಯಾತ್ಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ರಾಜಯೋಗಿ ಬಿ.ಕೆ. ಮಂಜುಳಾ ಮಾತನಾಡಿ, ಆತ್ಮವೇ ಒಂದು ಅದ್ಭುತ ಶಕ್ತಿ, ಆತ್ಮದ ತಂದೆ ಪರಮಾತ್ಮ. ನಮ್ಮಲ್ಲಿರುವ ವಿಚಾರಗಳು ದೂರವಾಗಬೇಕೆಂದರೆ ಪರಮಾತ್ಮನ ಧ್ಯಾನ ಅತ್ಯಗತ್ಯ ಎಂದರು.ಕಾರ್ಯಕ್ರಮದಲ್ಲಿ ಹುಲಿಕುಂಟೆ ಗ್ರಾಪಂ ಸದಸ್ಯ ರವಿಕುಮಾರ್, ಬೆಸ್ಕಾಂ ಎಇಇ ಶಾಂತಕುಮಾರ್, ಹನುಮಂತರಾಯಪ್ಪ, ನಿವೃತ್ತ ಶಿಕ್ಷಕ ಶಿವರಾಂ, ಜ್ಯೋತಿ, ಶಿಕ್ಷಕ ಚಂದ್ರಣ್ಣ, ಮುಖಂಡ ರಂಗನಾಥ್ ಸೇರಿ ಹಲವರು ಹಾಜರಿದ್ದರು.