ಸಾರಾಂಶ
ಕೊಳ್ಳೇಗಾಲ ತಾಲೂಕಿನ ಸರಗೂರು ಕಾವೇರಿ ನದಿ ಪಾತ್ರದಲ್ಲಿರುವ ಸ್ನಾನಘಟ್ಟವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಸರಗೂರು ಕಾವೇರಿ ನದಿ ಪಾತ್ರದಲ್ಲಿರುವ ಸ.ನಂ 215/ ಬಿ ಸ್ನಾನಘಟ್ಟ ಸ್ಥಳದ ವಿಚಾರದಲ್ಲಿ ಗ್ರಾಮಸ್ಥರೆಲ್ಲರೂ ಶಾಂತಿ ಕಾಪಾಡಿಕೊಳ್ಳುವ ಮೂಲಕ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.ವಿವಾದಿತ ಸ್ಥಳವಾದ ಸರಗೂರು ಗೋಮಾಳ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಗ್ರಾಮದ ಸ್ನಾನಘಟ್ಟ (ಗೋಮಾಳ) ಜಾಗದ ರಕ್ಷಣೆಗಾಗಿ ಆದಿ ಕರ್ನಾಟಕ ಜನಾಂಗದ ಸರಗೂರು ಗ್ರಾಮಸ್ಥರು ತೆಗೆಸಿದ್ದ ಟ್ರಂಚನ್ನು ತಹಸೀಲ್ದಾರ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮುಚ್ಚಿಸಿ ಗ್ರಾಮದ ಆದಿ ಕರ್ನಾಟಕ ಜನರ ಮೇಲೆ ನಿಂದಿಸಿದ್ದಾರೆ. ಅಲ್ಲದೆ, ಕಾವೇರಿ ನದಿ ತೀರದಲ್ಲಿರುವ ಜಾಗವನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ಆರೋಪ ಹಾಗೂ ದೂರನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಲಾಗಿದೆ.
ಪಾರದರ್ಶಕ ವರದಿ ಸಹಾ ತರಿಸಿಕೊಂಡು ಮುಂದಿನ ಕ್ರಮವಹಿಸಲಾಗುವುದು. ಅಲ್ಲಿತನಕ ಗ್ರಾಮಸ್ಥರು ಜಿಲ್ಲಾಡಳಿತದ ಜೊತೆ ಸಹಕರಿಸಬೇಕು, ಶಾಂತಿ ಕಾಪಾಡಿಕೊಳ್ಳಬೇಕು, ಈಗಾಗಲೇ ಸ್ನಾನಘಟ್ಟ ಪ್ರಕರಣದ ವಿಚಾರವನ್ನು ದೂರಿನಲ್ಲಿ ಸಂಪೂರ್ಣವಾಗಿ ನೀಡಿದ್ದೀರಿ. ಸರ್ವೆ ಕೂಡ ಮುಗಿದಿದೆ. ಆಕಾರ್ ಬಂದ್, ಲ್ಯಾಂಡ್ ರೇಕಾರ್ಡ್, ಸ್ನಾನಘಟ್ಟ ಪಕ್ಕದಲ್ಲಿರುವ ಖಾಸಗಿ ಜಮೀನು ಪರಿಶೀಲಿಸಿ ಸಮಸ್ಯೆಯನ್ನು ನಿಯಮಾನುಸಾರ ಬಗೆಹರಿಸಲಾಗುವುದು. ಸೆಸ್ಕ್ ಹಾಗೂ ನೀರಾವರಿ ಇಲಾಖೆಯಿಂದಲೂ ತನಿಖೆಗೆ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಏಕಪಕ್ಷಿಯವಾಗಿ ಕೆಲಸ ಮಾಡುವುದಿಲ್ಲ. ನಿಮಗೆ ಸರಿ ಅನಿಸಲಿಲ್ಲ ಎಂದರೂ ಮೇಲ್ಮನವಿ ಹೋಗಬಹುದು. ಅಲ್ಲಿಯವರೆವಿಗೂ ಯಥಾಸ್ಥಿತಿ ಕಾಪಾಡಿ ಎಂದು ಮನವಿ ಮಾಡಿದರು. ಈ ವೇಳೆ ಗ್ರಾಮದ ಅನೇಕ ಮುಖಂಡರಿಂದ ಜಿಲ್ಲಾಧಿಕಾರಿ ಮಾಹಿತಿಗಳನ್ನು ಪಡೆದರು.ಶಿರೆಸ್ತೇದಾರ್ ಕೃಪಾಕರ್, ಆರ್.ಐ ರಂಗಸ್ವಾಮಿ, ಎಡಿಎಲ್ ಆರ್ ನಟರಾಜು, ಗ್ರಾಮದ ಮುಖಂಡ ಮಲ್ಲು, ಶಿವಕುಮಾರ್, ಪುಟ್ಟಸ್ವಾಮಿ, ಪುಟ್ಟಮಾದಯ್ಯ, ಮಾದೇಶ್, ರಂಗಸ್ವಾಮಿ, ಮುಳ್ಳೂರು ಶಿವಮಲ್ಲು, ಪಾಳ್ಯ ಪರಮೇಶ್, ಹರಳೆ ಕೃಷ್ಣಪ್ಪ ಇನ್ನಿತರರಿದ್ದರು.