ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರದ ಆದೇಶದಂತೆ ನಗರದಲ್ಲಿರುವ ಅನಧಿಕೃತ ನಿವೇಶನ ಮತ್ತು ಮನೆಗಳಿಗೆ ಬಡವರ ಹಾಗೂ ಅವಶ್ಯಕತೆ ಇರುವವರ ಅನುಕೂಲಕ್ಕಾಗಿ 90 ದಿನಗಳ ಒಳಗಾಗಿ ಬಿ ಖಾತೆ ಮಾಡಿಕೊಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಹೇಳಿದರು.ನಗರಸಭೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರಸಭೆಯಿಂದ ಖಾತೆ ಮಾಡಿಸಿಕೊಳ್ಳಲು ಸಾರ್ವಜನಿಕರು ಸಾಕಷ್ಟು ಪರದಾಡುವಂತ ಪರಿಸ್ಥಿತಿ ಉಂಟಾಗಿತ್ತು. ಇದರ ನಿವಾರಣೆಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದಂತೆ ನಗರಸಭೆಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.
8,000 ಅನಧಿಕೃತ ಖಾತೆನಗರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು, ನಿವೇಶನಗಳು, ಗ್ರಾಮ ಪಂಚಾಯಿತಿ ಹಾಗೂ ನಗರದ ಹಳೆ ಪ್ರದೇಶಗಳಾದ ಗ್ರಾಮ ಠಾಣಾಗಳಿಂದ ಹಸ್ತಾಂತರಗೊಂಡಿರುವ ಹೌಸ್ ಲಿಸ್ಟ್ ಗಳ ಪ್ರದೇಶಗಳಿಗೆ ಇದೀಗ ಬಿ ಖಾತೆಗಳನ್ನು ಮಾಡಿಕೊಳ್ಳಲಾಗುವುದು. ನಗರದಲ್ಲಿ ಸರಿಸುಮಾರು 30 ಸಾವಿರಕ್ಕೂ ಅಧಿಕ ಖಾತೆಗಳಿದ್ದು ಈ ಪೈಕಿ 6 ರಿಂದ 8ಸಾವಿರ ಖಾತೆಗಳು ಅನಧಿಕೃತವಾಗಿರುವುದು ಕಂಡುಬಂದಿದ್ದು, ಇವೆಲ್ಲಕ್ಕೂ ಇದೀಗ ಮುಕ್ತಿ ಸಿಕ್ಕಂತಾಗಿದೆ ಎಂದರು.
ಇದರಿಂದಾಗಿ ಮದುವೆ, ಮುಂಜಿ, ಶೈಕ್ಷಣಿಕ ಸಾಲ, ಮನೆ ಕಟ್ಟಿಕೊಳ್ಳಲು ಸಾಲ ಸೇರಿದಂತೆ ವಿವಿಧ ರೀತಿಯ ಸೌಲತ್ತುಗಳನ್ನು ಬಿ ಖಾತೆ ಮಾಡಿಸಿಕೊಳ್ಳುವುದರಿಂದ ದೊರೆಯಲಿದೆ. ಈ ವಿಚಾರದಲ್ಲಿ ಶಾಸಕರ ಅಭಿಪ್ರಾಯವನ್ನು ಸಹ ಪಡೆದುಕೊಂಡು ಪಕ್ಷಾತೀತವಾಗಿ ಎಲ್ಲ ಸದಸ್ಯರ ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರ ಅಭಿವೃದ್ಧಿ ವಿಚಾರದಲ್ಲಿ ಮುಂದೆ ಸಾಗುವೆವು ಎಂದರು.ಹಳೆಯ ಸಮಸ್ಯೆಗೆ ಪರಿಹಾರ
ನಗರಸಭೆ ಉಪಾಧ್ಯಕ್ಷ ಜೆ. ನಾಗರಾಜ್ ಮಾತನಾಡಿ ಚಿಕ್ಕಬಳ್ಳಾಪುರ ಪುರಸಭೆಯಿಂದ ನಗರಸಭೆಯಾಗಿ ಪರಿವರ್ತನೆ ಯಾದಾಗಿಂದ ಖಾತೆ ಸಮಸ್ಯೆ ಇತ್ತು. ಇದೀಗ ಸರ್ಕಾರ ದಿಟ್ಟ ತೀರ್ಮಾನ ತೆಗೆದುಕೊಂಡು ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರದೇಶದಲ್ಲಿ ಖಾತಾ ವಿಚಾರದಲ್ಲಿದ್ದ ಸಮಸ್ಯೆ ನೀಗಿಸಿದಂತಾಗಲಿದೆ ಎಂದರು.ನಗರಸಭೆ ಆಯುಕ್ತ ಮನ್ಸೂರ್ ಅಲಿ ಮಾತನಾಡಿ, ಬಿ ಖಾತೆ ಮಾಡಲು ಸರ್ಕಾರದ ಆದೇಶದಿಂದ ಸ್ಥಳೀಯ ಸಂಸ್ಥೆ ಹಾಗೂ ಸರ್ಕಾರಕ್ಕೂ ಸಹ ಹೆಚ್ಚಿನ ರೀತಿಯಲ್ಲಿ ಆದಾಯ ಬರುವ ನಿರೀಕ್ಷೆ ಇದೆ. ಬಿ ಖಾತೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ಗೊಂದಲ ಉಂಟಾಗದಂತೆ ಶಾಸಕರ ಹಾಗೂ ಅಧ್ಯಕ್ಷರ ಸೂಚನೆಯಂತೆ ವಾರ್ಡುಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನ ಸ್ವೀಕರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಯತೀಶ್,ಸುಭ್ರಮಣ್ಯಾಚಾರಿ, ನಗರಸಭೆ ಅಧಿಕಾರಿಗಳು ಮತ್ತಿತರರು ಇದ್ದರು