ಪೆನ್‌ಡ್ರೈವ್‌ ದೇವರಾಜೇಗೌಡ ಹಿರಿಯೂರಲ್ಲಿ ಪೊಲೀಸ್‌ ವಶ

| Published : May 11 2024, 01:47 AM IST / Updated: May 11 2024, 05:22 AM IST

ಸಾರಾಂಶ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ಬಹಿರಂಗಪಡಿಸಿದ ಆರೋಪ ಎದುರಿಸುತ್ತಿರುವ ವಕೀಲ ದೇವರಾಜೇಗೌಡ  ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿರಿಯೂರು :  ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ಬಹಿರಂಗಪಡಿಸಿದ ಆರೋಪ ಎದುರಿಸುತ್ತಿರುವ ವಕೀಲ ದೇವರಾಜೇಗೌಡ ಮೇಲೆ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರಿನಿಂದ ಚಿತ್ರದುರ್ಗ ಕಡೆಗೆ ಇನೋವಾ ಕಾರಿನಲ್ಲಿ ದೇವರಾಜೇಗೌಡ ಅವರು ತೆರಳುತ್ತಿದ್ದರು. ಈ ವೇಳೆ, ಹೊಳೆನರಸೀಪುರ ಪೊಲೀಸರ ಸೂಚನೆ ಮೇರೆಗೆ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ಗೇಟ್ ಬಳಿ ಹಿರಿಯೂರು ಠಾಣೆಯ ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಹೊಳೆನರಸೀಪುರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹೊಳೆನರಸೀಪುರ ಪೋಲಿಸರು ಹಿರಿಯೂರು ಕಡೆ ತೆರಳುತ್ತಿದ್ದು, ದೇವರಾಜೇಗೌಡರನ್ನು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಏ.1ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯೊಬ್ಬಳು ದೇವರಾಜೇಗೌಡರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದಳು. ‘ವಿವಾದಿತ ನಿವೇಶನ ಮಾರಾಟ ಮಾಡಿಸಿಕೊಡುವಂತೆ ನಾನು ದೇವರಾಜೇಗೌಡ ಬಳಿ ಹೋಗಿದ್ದೆ. ನಿವೇಶನ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ, ಆಗಾಗ ನನಗೆ ಕರೆ ಮಾಡುತ್ತಿದ್ದರು. ವಿಡಿಯೋ ಕಾಲ್ ಮಾಡಿ ತಮ್ಮ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸುತ್ತಿದ್ದರು. ಅಲ್ಲದೆ, ಒಮ್ಮೆ ಅವರ ಮನೆಗೆ ಹೋಗಿದ್ದಾಗ ನನ್ನನ್ನು ಹೆದರಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ. ಈ ದೂರಿನನ್ವಯ ಹೊಳೆನರಸೀಪುರ ನಗರ ಠಾಣೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.

ಈ ಮಧ್ಯೆ, ದೇವರಾಜೇಗೌಡರು ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇ 8ರಂದು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಮೇ 15ರಂದು ಅದರ ವಿಚಾರಣೆ ನಡೆಯಲಿದೆ.