ಬಸವಣ್ಣನ ವಿಚಾರಧಾರೆಗಳಿಂದ ಸಾಮಾಜಿಕ ಸುಧಾರಣೆ ಸಾಧ್ಯ

| Published : May 11 2024, 01:46 AM IST

ಸಾರಾಂಶ

ವಿಶ್ವಗುರು ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಸುಗೂರೇಶ್ವರ್‌ ಶ್ರೀ ಅಭಿಮತ

ಕನ್ನಡಪ್ರಭ ವಾರ್ತೆ ಶಹಾಪುರ

ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯ ತೊಡೆದು ಹಾಕಲು ಶ್ರಮಿಸಿದ ಸಮಾನತೆ ಹರಿಕಾರ ಬಸವಣ್ಣನವರ ವಿಚಾರಧಾರೆಗಳನ್ನು ಎಲ್ಲ ವರ್ಗದ ಸಮುದಾಯದವರು ಅರಿತು ಅನುಷ್ಠಾನಕ್ಕೆ ತಂದರೆ ಇನ್ನಷ್ಟೂ ಸಾಮಾಜಿಕ ಸುಧಾರಣೆಯಾಗಲು ಸಾಧ್ಯ ಎಂದು ಕುಂಬಾರಗೇರಿ ಹಿರೇಮಠದ ಪೀಠಾಧಿಪತಿ ಸುಗೂರೇಶ್ವರ ಶ್ರೀಗಳು ಹೇಳಿದರು.

ನಗರದ ತಹಸೀಲ್ ಕಚೇರಿಯಲ್ಲಿ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಸಮಾಜದ ಪ್ರತಿಯೊಬ್ಬರು ಅವರ ಆದರ್ಶಗಳು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯ ಪೂರ್ಣ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮೇಲು-ಕೀಳು, ಜಾತಿ-ಧರ್ಮ ಹೀಗೆ ನೊಂದವರ ಪರವಾಗಿ ನಿಂತ ದೇವತಾ ಪುರುಷ. ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಬಸವಣ್ಣನವರು ಕ್ರಾಂತಿ ಬೀಜ ಬಿತ್ತಿದ ಸಮಾನತೆಯ ಹರಿಕಾರ. ಜಗತ್ತಿಗೆ ಕಾಯಕದ ಮಹತ್ವ ತೋರಿಸಿಕೊಟ್ಟ ಮಹಾನ್ ಪುರುಷ ಅವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು. ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಮಲ್ಲಣ್ಣ ಮಡ್ಡಿ, ತಾಲೂಕು ಯುವ ಘಟಕದ ಅಧ್ಯಕ್ಷ ಶಂಭುಲಿಂಗ ಗೋಗಿ, ಚಂದ್ರಶೇಖರ್ ಆರಬೋಳ, ಶರಣು ಗದ್ದುಗೆ, ಡಾ. ಬಸವರಾಜ್ ಇಜೇರಿ, ಬಸವರಾಜ್ ಹೇರುಂಡಿ, ಹಿರಿಯ ಲಿಂಗಣ್ಣ ಲಿಂಗದಳ್ಳಿ, ಕೋಲಿ ಸಮಾಜದ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ ಸೇರಿ ಇತರರಿದ್ದರು.