ಸಾರಾಂಶ
ಬೆಂಗಳೂರು : ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆ ರಾಜ್ಯದಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಸಾಯನಿಕ ಪಟಾಕಿ ಮಾರಾಟ ಹಾಗೂ ಬಳಕೆ ನಿಷಿದ್ಧ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಪಟಾಕಿ ದಾಸ್ತಾನು ಮಳಿಗೆಗಳನ್ನು ಪರಿಶೀಲಿಸಬೇಕು. ಹಸಿರು ಪಟಾಕಿ ಹೊರತಾಗಿ ಬೇರೆ ಹಾನಿಕಾರಕ ಪಟಾಕಿ ಮಾರಾಟ ಮಾಡುತ್ತಿದ್ದರೆ ಅಥವಾ ಸೂಕ್ತವಲ್ಲದ ಸ್ಥಳದಲ್ಲಿ ನಿಯಮ ಬಾಹಿರವಾಗಿ ಪಟಾಕಿ ದಾಸ್ತಾನು ಮಾಡಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.
ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಹಚ್ಚಬಹುದು. ರಾತ್ರಿ 10 ಗಂಟೆ ಮೇಲೆ ಪಟಾಕಿ ಮಾರಾಟ ಹಾಗೂ ಬಳಕೆ ನಿಷಿದ್ಧ. ಈ ಬಗ್ಗೆ ಪೊಲೀಸರು ಎಚ್ಚರವಹಿಸಬೇಕು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಸೂಚಿಸಿದರು.
- ಸುಪ್ರೀಂಕೋರ್ಟ್ ಸೂಚನೆ ಇದೆ. ರಾಜ್ಯದಲ್ಲಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು- ಜಿಲ್ಲಾಧಿಕಾರಿಗಳು, ಪೊಲೀಸರು ಪಟಾಕಿ ದಾಸ್ತಾನು ಮಳಿಗೆಗಳಲ್ಲಿ ಪರಿಶೀಲನೆ ನಡೆಸಬೇಕು
- ರಾಸಾಯನಿಕ ಪಟಾಕಿ ಮಾರಾಟ ಮಾಡುತ್ತಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು
- ರಾತ್ರಿ 10 ಗಂಟೆ ಮೇಲೆ ಪಟಾಕಿ ಮಾರಾಟ, ಬಳಕೆ ನಿಷಿದ್ಧ: ಡೀಸಿಗಳ ಸಭೆಯಲ್ಲಿ ಸಿಎಂ ಸೂಚನೆ