ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿಶಿಗ್ಗಾಂವಿ ಬಳಿಯ ಗೊಟಗೋಡಿಯಲ್ಲಿ ಇರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಪಿಎಚ್.ಡಿ ಪ್ರವೇಶಾತಿ ಪರೀಕ್ಷೆ ನಡೆಸುವ ಪ್ರಕ್ರಿಯೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕುಲಪತಿ ಡಾ. ಟಿ.ಎಂ. ಭಾಸ್ಕರ್ ಅವರ ಅಧಿಕಾರಾವಧಿ ನಾಲ್ಕು ದಿನ ಬಾಕಿ ಇರುವಾಗ ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಜಾನಪದ ಸಂಶೋಧನೆಯಿಂದ ಸುದ್ದಿಯಲ್ಲಿರಬೇಕಿದ್ದ ಜಾನಪದ ವಿಶ್ವವಿದ್ಯಾಲಯ ಒಂದಿಲ್ಲೊಂದು ವಿವಾದದಿಂದಲೇ ಗಮನ ಸೆಳೆಯುತ್ತಿದೆ. ವಿವಿಯಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೂ ಇಲ್ಲಿ ಪಿಎಚ್‌ಡಿ ಮಾಡುವವರ ಸಂಖ್ಯೆ ಮಾತ್ರ ಹುಬ್ಬೇರಿಸುವಂತಿದೆ. ಇಲ್ಲಿಯ ಕೆಲವು ಪಿಜಿ ವಿಭಾಗಗಳಲ್ಲಿ ಪ್ರವೇಶ ಪಡೆದವರ ಸಂಖ್ಯೆ ಎರಡಂಕಿ ದಾಟುತ್ತಿಲ್ಲ. ಆದರೆ, ಪಿಎಚ್‌ಡಿಗೆ ಮಾತ್ರ ಭಾರಿ ಡಿಮ್ಯಾಂಡ್ ಬಂದಿದ್ದು, ಇದೇ ವಿಷಯ ಈಗ ಸರ್ಕಾರದ ಮಟ್ಟಕ್ಕೂ ಹೋಗಿದೆ.ವಿಸಿ ನಿವೃತ್ತಿ ವೇಳೆ ಪರೀಕ್ಷೆ: ವಿವಿ ಕುಲಪತಿ ಟಿ.ಎಂ.ಭಾಸ್ಕರ್ ಅವರ ಅಧಿಕಾರ ಅವಧಿ ಜು.18ಕ್ಕೆ ಮುಗಿಯಲಿದೆ. ಈ ಸಂದರ್ಭದಲ್ಲಿ ತರಾತುರಿಯಲ್ಲಿ, ನಿಯಮ ಬಾಹಿರವಾಗಿ ಪಿಎಚ್‌ಡಿ ಪ್ರವೇಶ ಪರೀಕ್ಷೆ ಮಾಡಲಾಗುತ್ತಿದೆ. ಇದೇ ಬರುವ ಜು.13ರಂದು ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ನಿಯಮ ಮೀರಿ ಪಿಎಚ್‌ಡಿಗೆ ಅವಕಾಶ ನೀಡುತ್ತಿರುವುದು, ಮಾರ್ಗದರ್ಶಕರೇ ಇಲ್ಲದಿದ್ದರೂ ಪಿಎಚ್‌ಡಿಗೆ ಆಯ್ಕೆ ಮಾಡುವುದು ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ನೂರಕ್ಕೂ ಹೆಚ್ಚು ಜನರು ಇಲ್ಲಿ ಪಿಎಚ್‌ಡಿಗೆ ನೋಂದಾಯಿಸಿಕೊಂಡಿದ್ದಾರೆ. ಈಗ ಮತ್ತೆ ಹೊಸದಾಗಿ ಪ್ರವೇಶ ಪರೀಕ್ಷೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉನ್ನತ ಶಿಕ್ಷಣ ಇಲಾಖೆ ಆಕ್ಷೇಪ: ಉನ್ನತ ಶಿಕ್ಷಣ ಇಲಾಖೆಯಿಂದ ವಿಶ್ವವಿದ್ಯಾಲಯಕ್ಕೆ ಕಳುಹಿಸಿರುವ ಪತ್ರದಲ್ಲಿ, ಪಿಎಚ್.ಡಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವು ಯುಜಿಸಿ ನಿಯಮಗಳು ಹಾಗೂ ಸರ್ಕಾರದ ಅನುಮೋದಿತ ಮಾರ್ಗಸೂಚಿಗಳನ್ನು ಪಾಲಿಸಿದೆಯೇ ಎಂಬುದರ ಬಗ್ಗೆ ವರದಿ ಕೇಳಿದೆ. ಪಿಎಚ್‌ಡಿ ಪ್ರವೇಶಾತಿ ಸರ್ಕಾರ ಅನುಮೋದಿಸಿರುವ ಕೋರ್ಸುಗಳಿಗೆ ಮಾತ್ರ ಸೀಮಿತವಾಗಿದೆಯೇ, ಅಧಿಸೂಚನೆ ಹೊರಡಿಸುವ ಮುನ್ನ ಯುಜಿಸಿ ನಿಯಮಾನುಸಾರ ಅಗತ್ಯ ಸಂಖ್ಯೆಯ ಸಂಶೋಧನಾ ಮಾರ್ಗದರ್ಶಕರು ಲಭ್ಯವಿದ್ದಾರೆಯೇ, ರೋಸ್ಟರ್ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಶಿಕಲಾ ಅವರು ವಿವಿ ಕುಲಸಚಿವರಿಗೆ ಪತ್ರ ಬರೆದು ವರದಿ ಕೇಳಿದ್ದಾರೆ.
ಪರೀಕ್ಷೆ ತಡೆಹಿಡಿಯುವಂತೆ ಪತ್ರ: ಸರ್ಕಾರ ಕೇಳಿದ ಅಂಶಗಳ ಕುರಿತು ಸಮರ್ಪಕ ವರದಿ ಸಲ್ಲಿಸುವವರೆಗೆ ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆಯನ್ನು ತಡೆಹಿಡಿಯಬೇಕು ಎಂದು ಮೌಲ್ಯಮಾಪನ ಕುಲಸಚಿವರಿಗೆ ವಿವಿ ಆಡಳಿತ ಕುಲಸಚಿವರು ಪತ್ರ ಬರೆದು ಸೂಚಿಸಿದ್ದಾರೆ. ಇದರಿಂದ ವಿವಿಯಲ್ಲಿ ಯಾವುದೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾದಂತಾಗಿದೆ. ಈ ಬೆಳವಣಿಗೆಯಿಂದ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಅನಿಶ್ಚಿತತೆ ಉಂಟಾಗಿದೆ.
ಪಿಎಚ್‌ಡಿಗೆ ಭಾರಿ ಡಿಮ್ಯಾಂಡ್: ಜಾನಪದ ವಿಶ್ವವಿದ್ಯಾಲಯ ಈಗ ಪಿಎಚ್‌ಡಿ ನೀಡುವ ವಿವಿಯಾಗಿ ಬದಲಾಗುತ್ತಿದೆ. ಸೂಕ್ತ ಮಾರ್ಗದರ್ಶಕರ ಕೊರತೆಯಿದ್ದರೂ ದಾಖಲೆಯ ಸಂಖ್ಯೆಯಲ್ಲಿ ಇಲ್ಲಿ ಪಿಎಚ್‌ಡಿಗೆ ಪ್ರವೇಶ ಪಡೆಯುತ್ತಿದ್ದಾರೆ. ಕಳೆದ ಸಾಲಿನ ಬ್ಯಾಚ್‌ನಲ್ಲಿ 127 ಸಂಶೋಧನಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದಕ್ಕೂ ಹಿಂದಿನ ಬ್ಯಾಚ್‌ನ 50 ವಿದ್ಯಾರ್ಥಿಗಳು ಸೇರಿದಂತೆ ಸದ್ಯ ಒಟ್ಟು 177 ಜನರು ಪಿಎಚ್‌ಡಿ ಮಾಡುತ್ತಿದ್ದಾರೆ. ವಿವಿಯಿಂದ ಈಗಾಗಲೇ 27 ಜನರು ಡಾಕ್ಟರೇಟ್ ಪಡೆದಿದ್ದಾರೆ. ಈ ಸಲ 430ಕ್ಕೂ ಹೆಚ್ಚು ಅರ್ಜಿಗಳು ಬಂದಿರುವ ಮಾಹಿತಿ ಲಭ್ಯವಾಗಿದೆ.ಪಿಎಚ್‌ಡಿ ಪ್ರವೇಶ ಪರೀಕ್ಷೆ ಜು.13ಕ್ಕೆ ನಿಗದಿಯಾಗಿದೆ. ರಜೆಯಲ್ಲಿ ಇರುವುದರಿಂದ ಸರ್ಕಾರದಿಂದ ಸ್ಪಷ್ಪನೆ ಕೋರಿ, ಪರೀಕ್ಷೆ ತಡೆಹಿಡಿಯುವಂತೆ ಬರೆದ ಪತ್ರ ನನ್ನ ಗಮನಕ್ಕೆ ಬಂದಿಲ್ಲ. ಶನಿವಾರ ಹೋಗಿ ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮೌಲ್ಯಮಾಪನ ಕುಲಸಚಿವ ಡಾ. ಶಿವಶಂಕರ್ ಹೇಳಿದರು.