ಹಾವೇರಿ: ತಾಲೂಕಿನ ಗುತ್ತಲ ಸಮೀಪದಲ್ಲಿರುವ ಕುರಿ ಸಂವರ್ಧನಾ ಕೇಂದ್ರದ ಜಾಗವನ್ನು ಸೋಲಾರ್ ಪವರ್ ಪ್ಲಾಂಟ್‌ಗಾಗಿ ಖಾಸಗಿ ಕಂಪನಿಗೆ ಕೊಡುತ್ತಿರುವ ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಖಾಸಗಿ ಕಂಪನಿಯೊಂದಿಗೆ ಮಾಡಿಕೊಳ್ಳಲಾದ ಒಪ್ಪಂದ ನಿಲ್ಲಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ನಿರ್ದೇಶಕ ಜೋಗಿ ಜಯಪ್ಪನವರ ಮಾತನಾಡಿ, ಹಾವೇರಿ ಜಿಲ್ಲೆಯ ಗುತ್ತಲ ಸಮೀಪದಲ್ಲಿರುವ ಕುರಿ ಸಂವರ್ಧನಾ ಕೇಂದ್ರದ ಸರ್ವೇ ನಂ.371, 372 ಹಾಗೂ 373ರಲ್ಲಿರುವ ಜಾಗವು ಕುರಿಗಾರರ ಅಭಿವೃದ್ಧಿಗೆ, ಕುರಿ ಮತ್ತು ಆಡುಗಳ ತಳಿ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ಜಾಗವಾಗಿದೆ. ಇಂತಹ ನೂರಾರು ಎಕರೆ ಜಾಗವನ್ನು ಮೀಸಲಿಟ್ಟಿರುವ ಉದ್ದೇಶಕ್ಕೆ ಬಳಸದೆ ಕುರಿ ಸಂವರ್ಧನಾ ಕೇಂದ್ರವು ಖಾಸಗಿಯವರ ಲಾಭಕ್ಕಾಗಿ ತನ್ನ ಇಲಾಖೆಯ ಉದ್ದೇಶವನ್ನು ಗಾಳಿಗೆ ತೂರಿ ಸೋಲಾರ್ ಪವರ್ ಪ್ಲಾಂಟ್ ಮಾಡಲು ಖಾಸಗಿಯವರಿಗೆ ನೀಡಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ದೂರಿದರು.ಕುರಿ ಸಂವರ್ಧನಾ ಕೇಂದ್ರದ ಜಾಗೆಯನ್ನು ಸರ್ಕಾರ ಯಾವ ಉದ್ದೇಶಕ್ಕಾಗಿ ಮೀಸಲಿಟ್ಟಿದೆಯೋ ಅದೇ ಉದ್ದೇಶಕ್ಕೆ ಮೀಸಲಿಡಬೇಕು. ಕುರಿ ಸಂವರ್ಧನಾ ಕೇಂದ್ರದವರು ಖಾಸಗಿಯವರ ಒತ್ತಡಕ್ಕೆ ಮಣಿದು, ಲಾಭಕ್ಕಾಗಿ ಸರ್ಕಾರಿ ಜಾಗ ನೀಡಲು ಹೊರಟಿರುವುದು ಉದ್ಧಟತನವಾಗಿದೆ. ಈ ಜಾಗವನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಹಸ್ತಾಂತರ ಮಾಡಕೂಡದು. ಕುರಿ ಸಂವರ್ಧನಾ ಕೇಂದ್ರದವರು ಖಾಸಗಿ ಸೋಲಾರ್ ಪವರ್ ಪ್ಲಾಂಟ್‌ನವರ ಜತೆಗೆ ಮಾಡಿಕೊಂಡ ಎಲ್ಲಾ ಒಪ್ಪಂದವನ್ನು ಈ ಕೂಡಲೇ ರದ್ದುಪಡಿಸಬೇಕು. ಯಾವುದೇ ಮುಂದಿನ ಪ್ರಕ್ರಿಯೆಗಳನ್ನು ನಡೆಸಬಾರದು. ಒಂದುವೇಳೆ ಮುಂದೆ ಹಸ್ತಾಂತರ ಮಾಡಿದ್ದೇಯಾದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕನಕದಾಸ ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಮೋಟೆಬೆನ್ನೂರ, ಸಂಚಾರಿ ಕುರಿಗಾರರ ಸಂಘದ ಅಧ್ಯಕ್ಷ ರಾಮಚಂದ್ರ ಹೆಗಡೆ, ಕುರುಬರ ಸಮಾಜದ ತಾಲೂಕಾಧ್ಯಕ್ಷ ವಿರೂಪಾಕ್ಷಪ್ಪ ಹುಲ್ಲೂರ, ಮಾಜಿ ಅಧ್ಯಕ್ಷ ಜಗದೀಶ ಹರಮಗಟ್ಟಿ, ಹಾಲುಮತ ಸಮಾಜದ ಮುಖಂಡ ತಿರಕಪ್ಪ ಹುಳುಕೆಲ್ಲಪ್ಪನವರ, ದುರಗಪ್ಪ ದೇವರಗುಡ್ಡ, ಭರಮಪ್ಪ ಚಿನ್ನಿಕಟ್ಟಿ, ಸುರೇಶ ಕತ್ತಿ, ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.