ಬಸವರಾಜ ಮುತ್ತಗಿ ಮೇಲೆ ದಾಳಿಯ ಸಂಚು ಬಯಲು

| Published : Nov 11 2024, 11:47 PM IST

ಸಾರಾಂಶ

ಸುಮಾರು 20ರಿಂದ 30 ಹುಡುಗರ ತಂಡವು ಬಸವರಾಜ ಮುತ್ತಗಿ ಮನೆ ಮೇಲೆ ದಾಳಿ ಮಾಡಿ ಆತನನ್ನು ಮುಗಿಸಲು ಸಂಚು ರೂಪಿಸಿದೆ ಎಂಬುದಾಗಿ ಗುಪ್ತಚರದಿಂದ ತಿಳಿದು ಬಂದಿದೆ.

ಧಾರವಾಡ:

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಜೀವ ಬೆದರಿಕೆಯಿಂದ ಇತ್ತೀಚಿಗಷ್ಟೇ ಅವರ ಮನೆಗೆ ಸಿಆರ್‌ಪಿಎಫ್‌ ಕಮಾಂಡೋಗಳ ಭದ್ರತೆ ನೀಡಲಾಗಿತ್ತು. ಇಷ್ಟಾಗಿಯೂ ಮುತ್ತಗಿ ಅವರನ್ನು ಮುಗಿಸುವ ಕುರಿತಂತೆ ಸಂಚು ನಡೆದಿದೆ ಎಂಬ ಭಯಾನಕ ಮಾಹಿತಿಯು ಇದೀಗ ಬಯಲಾಗಿದೆ.

ಯೋಗೀಶಗೌಡ ಗೌಡರ ಕೊಲೆ ಪ್ರಕರಣದ 9ನೇ ಆರೋಪಿ ಅಶ್ವತ್ಥ ಎಂಬಾತ ಮುತ್ತಗಿಗೆ ನಿರಂತರವಾಗಿ ಜೀವ ಬೆದರಿಕೆ ಹಾಕುತ್ತಿದ್ದನು. ಅಲ್ಲದೇ ಈತನಿಂದಲೇ ಮುತ್ತಗಿ ಕುಟುಂಬಸ್ಥರಿಗೂ ಜೀವ ಬೆದರಿಕೆ ಇತ್ತು. ಯಾವುದೇ ಕಾರಣಕ್ಕೂ ಮುತ್ತಗಿ ಮಾಫಿ ಸಾಕ್ಷಿಯಾಗಬಾರದು ಎನ್ನುವ ಉದ್ದೇಶವೇ ಇದಕ್ಕೆ ಕಾರಣ ಎನ್ನುವುದು ಬಹಿರಂಗ ಸತ್ಯ. ಇದೇ ಕಾರಣಕ್ಕೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಭದ್ರತೆ ನೀಡುವಂತೆ ಸಿಬಿಐಗೆ ಆದೇಶ ಮಾಡಿತ್ತು. ಅಂತೆಯೇ, ಕೆಲಗೇರಿ ರಸ್ತೆಯ ಅಶೋಕ ನಗರದಲ್ಲಿರುವ ಮುತ್ತಗಿ ಮನೆಗೆ 20 ದಿನಗಳಿಂದ ಸಿಆರ್‌ಪಿಎಫ್‌ ಭಾರೀ ಭದ್ರತೆ ನೀಡಿದೆ. ಇದೇ ವೇಳೆ ಮತ್ತೊಂದು ಆಘಾತಕಾರಿ ಅಂಶವೊಂದು ಕೇಂದ್ರ ಗುಪ್ತಚರ ಸಂಸ್ಥೆಯಿಂದ ಬೆಳಕಿಗೆ ಬಂದಿದೆ.

ಸುಮಾರು 20ರಿಂದ 30 ಹುಡುಗರ ತಂಡವು ಮುತ್ತಗಿ ಮನೆ ಮೇಲೆ ದಾಳಿ ಮಾಡಿ ಆತನನ್ನು ಮುಗಿಸಲು ಸಂಚು ರೂಪಿಸಿದೆ ಎಂಬುದಾಗಿ ಗುಪ್ತಚರದಿಂದ ತಿಳಿದು ಬಂದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಹೆಚ್ಚಿನ ಭದ್ರತೆ ನೀಡುವ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸಿಬಿಐ ಅಧಿಕಾರಿಗಳು, ಸಿಆರ್‌ಪಿಎಫ್‌ ಅಧಿಕಾರಿಗಳು, ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಹಾಗೂ ಧಾರವಾಡದ ಎಸಿಪಿ ಭಾಗವಹಿಸಿದ್ದರು. ಈ ವೇಳೆ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಯಿತು. ಇದೇ ವೇಳೆ ಮುತ್ತಗಿಗೆ ಹಾಗೂ ಆತನ ಮನೆಗೆ ಮತ್ತಷ್ಟು ಭದ್ರತೆ ನೀಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ.

ಇದೇ ನ. 14ರಂದು ಬಸವರಾಜ ಮುತ್ತಗಿ ಸಾಕ್ಷಿ ನಡೆಯಲಿದೆ. ಆ ಸಾಕ್ಷಿ ವೇಳೆ ತಮ್ಮ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು ಎನ್ನುವುದು ಆರೋಪಿಗಳ ಲೆಕ್ಕಾಚಾರವಾಗಿದೆ ಎನ್ನುವುದು ಮುತ್ತಗಿ ಹೇಳಿಕೆ. ಈ ಎಲ್ಲ ಬೆಳವಣಿಗೆಗಳ ನಡುವೆ 9ನೇ ಆರೋಪಿ ಅಶ್ವತ್ಥ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಸಿಬಿಐ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋಗಿತ್ತು. ಆದರೆ, ಕೋರ್ಟ್ ಅರ್ಜಿ ವಜಾ ಮಾಡಿತ್ತು. ಇದೀಗ ಸಿಬಿಐ ಆತನ ಹಾಗೂ ಆತನೊಂದಿಗೆ ಸೇರಿರುವ ಕೆಲವರ ಜಾಮೀನು ರದ್ದುಗೊಳಿಸವಂತೆ ಮಂಗಳವಾರ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ ಎನ್ನುವ ಮಾಹಿತಿ ಸಹ ಇದೆ. ಈ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಗಂಭೀರವಾಗಿ ವಿಚಾರಣೆ ನಡೆಯುತ್ತಿದ್ದರೂ ಬಸವರಾಜ ಮುತ್ತಗಿಗೆ ಜೀವ ಬೆದರಿಕೆ, ಅವರನ್ನು ಮುಗಿಸಲು ಸಂಚು ನಡೆದಿದೆ ಎನ್ನುವುದು ಆತಂಕದ ಸಂಗತಿಯೇ ಸರಿ. ಈ ಆತಂಕವನ್ನು ಪೊಲೀಸ್‌ ಇಲಾಖೆ ಹಾಗೂ ಸಿಬಿಐ ಯಾವ ರೀತಿ ತಿಳಿಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.