ಬಂಗಾರು ಹನುಮಂತು 25 ಸಾವಿರ ಮತಗಳ ಗೆಲುವು ಖಚಿತ: ಜನಾರ್ದನ ರೆಡ್ಡಿ

| Published : Nov 11 2024, 11:47 PM IST

ಸಾರಾಂಶ

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದರೂ, ಕ್ಷೇತ್ರದಲ್ಲಿನ ಪ್ರಮುಖ ರಸ್ತೆಗಳನ್ನು ₹೨೫೦ ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಯಿತು.

ಸಂಡೂರು: ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಗ್ರಾಮ ಹಾಗೂ ಅಲ್ಲಿನ ಪ್ರತಿ ಮನೆಗೆ ಭೇಟಿ ನೀಡಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ಮಾಡಿ, ಮತಯಾಚಿಸಿದ್ದೇವೆ. ಈ ಬಾರಿ ಬಂಗಾರು ಹನುಮಂತು ಗೆಲುವು ನಿಶ್ಚಿತ. ಅವರು ೨೦-೨೫ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ಅಭಿವೃದ್ಧಿ ಎಂದರೆ ಬಿಜೆಪಿ. ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದರೂ, ಕ್ಷೇತ್ರದಲ್ಲಿನ ಪ್ರಮುಖ ರಸ್ತೆಗಳನ್ನು ₹೨೫೦ ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಯಿತು. ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದಲ್ಲಿ, ಪ್ರತಿ ಜಿಪಂ ಕ್ಷೇತ್ರಕ್ಕೆ ಒಂದು ೩೦ ಬೆಡ್ ಆಸ್ಪತ್ರೆ, ಪ್ರತಿ ಗ್ರಾಮದಲ್ಲಿ ಸ್ಮಾರ್ಟ್ ಕ್ಲಾಸ್ ಶಾಲೆಗಳು, ಸಿಮೆಂಟ್ ರಸ್ತೆ, ತಾಲೂಕು ಕೇಂದ್ರದಲ್ಲಿ ೩೦೦ ಬೆಡ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಸಮರ್ಪಕ ಶುದ್ಧ ಕುಡಿಯುವ ನೀರನ್ನು ಪೂರೈಸುವುದಾಗಿ ಭರವಸೆ ನೀಡಿದ್ದೇವೆ. ಕ್ಷೇತ್ರದ ಜನತೆ ಬಿಜೆಪಿ ಮೇಲೆ ವಿಶ್ವಾಸವಿಟ್ಟು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.

ವಿಧಾನ ಪರಿಷತ್ ಸದಸ್ಯ ನವಿನ್‌ಕುಮಾರ್ ಮಾತನಾಡಿ, ಸಂಡೂರಿನಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕ್ಷೇತ್ರದ ಶಾಸಕರ ೧೬-೧೭ ವರ್ಷದ ಆಡಳಿತಾವಧಿಯಲ್ಲಿ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ವಾಲ್ಮಿಕಿ ನಿಮಗ, ಮೂಡಾ ಮುಂತಾದ ವಿವಿಧ ಹಗರಣಗಳಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಮತದಾರರು ಮತ ಚಲಾಯಿಸಲಿದ್ದಾರೆ. ವಕ್ಫ್, ವಾಲ್ಮೀಕಿ ನಿಗಮದ ಹಗರಣಗಳು ಚುನಾವಣೆಯ ಮೇಲೆ ನೇರ ಪರಿಣಾಮ ಬೀರಲಿವೆ. ಜನರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಉಪಸ್ಥಿತರಿದ್ದರು.