ಜ್ಞಾನದ ಜೊತೆಗೆ ಕಲಿಕೆ ನಿರಂತರವಾಗಿರಲಿ: ಹಿರಿಯ ಆಯುರ್ವೇದ ತಜ್ಞವೈದ್ಯ ಡಾ. ಗುರುಬಸವರಾಜು

| Published : Nov 11 2024, 11:47 PM IST

ಜ್ಞಾನದ ಜೊತೆಗೆ ಕಲಿಕೆ ನಿರಂತರವಾಗಿರಲಿ: ಹಿರಿಯ ಆಯುರ್ವೇದ ತಜ್ಞವೈದ್ಯ ಡಾ. ಗುರುಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧತೆಯ ಹಾದಿ ಜಟಿಲವಿದ್ದರು ಗುರಿ ತಲುಪಬೇಕು. ಯಶಸ್ಸಿನಲ್ಲಿ ಬೇರೆಯವರ ಯೋಚನೆ ಬೇಡ. ಒಂದು ಲಕ್ಷ ಮಂದಿ ಪರೀಕ್ಷೆ ಬರೆದು ನೂರು ಜನ ಅಯ್ಕೆಯಾಗುತ್ತಾರೆ ಎಂದರೆ ಅವರ ಶ್ರಮ ನಿರಂತರವಿರುತ್ತದೆ. ನಿಮ್ಮ ಪಠ್ಯಕ್ರಮವನ್ನು ಪುನಃ ಪುನಃ ತಿರುವಿ ಹಾಕುತ್ತಿರಿ.

ಕನ್ನಡಪ್ರಭ ವಾರ್ತೆ ಮೈಸೂರು

ಜ್ಞಾನಕ್ಕಿಂತ ಮಿಗಿಲಾದದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಜ್ಞಾನದ ಜೊತೆ ಜೊತೆಗೆ ಕಲಿಕೆ ಎಂಬುದು ನಿರಂತರವಾಗಿ ಸಾಗಬೇಕು. ಆ ಮೂಲಕ ನಿಮ್ಮ ಕನಸುಗಳನ್ನು ಸಕಾರಗೊಳಿಸಿಕೊಳ್ಳಬಹುದು ಎಂದು ಹಿರಿಯ ಆಯುರ್ವೇದ ತಜ್ಞವೈದ್ಯ ಡಾ. ಗುರುಬಸವರಾಜು‌ ತಿಳಿಸಿದರು.

ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆಯು ಸೋಮವಾರ ಸಂಜೆ ಆಯೋಜಿಸಿದ್ದ ಎಸ್ಎಸ್ ಸಿ ಮತ್ತು ಬ್ಯಾಂಕಿಂಗ್‌ ಹುದ್ದೆಗಳ ಪರೀಕ್ಷೆಗಳಿಗೆ 60 ದಿನ ನಡೆದ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಅಧ್ಯಯನ ಸಾಮಗ್ರಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕಳೆದ 50 ವರ್ಷಗಳ ಹಿಂದೆ ನಾವು ಓದುತ್ತಿದ್ದ ಕಾಲದಲ್ಲಿ ಇಷ್ಟೊಂದು ಸೌಲಭ್ಯಗಳು ಮತ್ತು ಮಾರ್ಗದರ್ಶನ ಮಾಡುವ ಸಂಸ್ಥೆಗಳು ಇರಲಿಲ್ಲ. ಜೊತೆಗೆ ಬಡತನ ಮತ್ತು ಕಷ್ಟದ ಜೀವನದಲ್ಲಿ ವಿದ್ಯಾಭ್ಯಾಸ ಮಾಡಬೇಕಿತ್ತು. ಆದರೆ, ಇಂದು ಈ ಕಾಲದಲ್ಲಿರುವ ನೀವೇ ಪುಣ್ಯವಂತರು. ಡಿಜಿಟಲ್‌, ಎಐ, ನ್ಯಾನೋ ಮುಂತಾದ ತಂತ್ರಜ್ಞಾನ ಯುಗದಲ್ಲಿ ಇದ್ದೀರಾ. ಸಾಧನೆ ಮಾಡಲು ಇನ್ನೇನು ಬೇಕು ಎಂದು ಅವರು ಪ್ರಶ್ನಿಸಿದರು.

ಕೆಲವರು ತಂತ್ರಜ್ಞಾನವನ್ನು ತೆಗಳುತ್ತಾರೆ, ಅದು ತಪ್ಪು. ಅದನ್ನು ನಮ್ಮ ಸಾಧನೆಗೆ ಹೇಗೆ ಬಳಸಿಕೊಳ್ಳಬೇಕೆಂದು ಅರಿತರೆ ಅದ್ಭುತಗಳನ್ನು ಸೃಷ್ಟಿಸಿ ಸಾಧಿಸಬಹುದು. ಗುರಿ ಮುಟ್ಟುವ ತನಕ ಜ್ಞಾನದ ತೃಷೆ ಆರಿದಂತೆ ನೋಡಿಕೊಳ್ಳಬೇಕು. ಹೀಗಾಗ ಬೇಕಾದರೆ ಜ್ಞಾನಿಗಳೊಂದಿಗೆ ಹೆಚ್ಚಿನ ಒಡನಾಡ ಇಟ್ಟುಕೊಳ್ಳಬೇಕು ಎಂದರು.

ಹಿರಿಯ ರಾಜ್ಯಶಾಸ್ತ್ರ ವಿದ್ವಾಂಸ ಪ್ರೊ.ಎಚ್.ಎಂ ರಾಜಶೇಖರ್ ಮಾತನಾಡಿ, ಸ್ಪರ್ಧಾತ್ಮಕ ಯಗಕ್ಕೆ ಬರಲು ಧೈರ್ಯ ಇರಬೇಕು. ಅಡೆತಡೆಗೆ ಚಿಂತಿಸಬೇಡಿ. ನಿರಂತರ ಶ್ರಮದ ಬೆನ್ನೆತ್ತಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಿಸಬೇಕು. ಆವಾಗ ಮಾತ್ರ ನಿಮ್ಮ ಗುರಿ ತಲುಪುವ ದಾರಿ ಸುಗಮವಾಗುತ್ತದೆ. ಜೊತೆಗೆ ಆತ್ಮವಿಶ್ವಾಸ ಮುಖ್ಯವಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರ ಉತ್ತಮ ಚೇತರಿಕೆ ಕಂಡಿದೆ. ಸಕಾರಾತ್ಮಕ ಚಿಂತನೆ ಜೊತೆಗೆ ನಿರಂತರ ಓದು ಹಾಗೂ ವಿಮರ್ಶಾತ್ಮಕವಾಗಿ ಇರಬೇಕು ಎಂದು ತಿಳಿಸಿದರು.

ಪುರಾತತ್ವ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ‌ದೇವರಾಜು ಮಾತನಾಡಿ, ಸಿದ್ಧತೆಯ ಹಾದಿ ಜಟಿಲವಿದ್ದರು ಗುರಿ ತಲುಪಬೇಕು. ಯಶಸ್ಸಿನಲ್ಲಿ ಬೇರೆಯವರ ಯೋಚನೆ ಬೇಡ. ಒಂದು ಲಕ್ಷ ಮಂದಿ ಪರೀಕ್ಷೆ ಬರೆದು ನೂರು ಜನ ಅಯ್ಕೆಯಾಗುತ್ತಾರೆ ಎಂದರೆ ಅವರ ಶ್ರಮ ನಿರಂತರವಿರುತ್ತದೆ. ನಿಮ್ಮ ಪಠ್ಯಕ್ರಮವನ್ನು ಪುನಃ ಪುನಃ ತಿರುವಿ ಹಾಕುತ್ತಿರಿ ಎಂದು ಸಲಹೆ ನೀಡಿದರು.

ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ‌, ಜ್ಞಾನಬುತ್ತಿ ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣ ಗೌಡ, ಎಚ್. ಬಾಲಕೃಷ್ಣ, ಡಾ.ಕೃ.ಪ. ಗಣೇಶ, ಕಿರಣ್‌ ಕೌಶಿಕ್‌, ಯು.ಎಂ. ಶರದ್ ರಾವ್, ಎಂ. ರಾಜೀವ್ ಶರ್ಮ, ಎಸ್. ರಾಧಾಕೃಷ್ಣ ಇದ್ದರು.

‘ಸಮಯದ ನಿರ್ವಹಣೆ ಇರಲಿ. ಪರೀಕ್ಷಾ ಕೇಂದ್ರದಲ್ಲಿ ಕುಳಿತು ಯೋಚಿಸುವುದು ಕೂಡ ಸಮಯದ ವ್ಯತ್ಯವೇ ಆಗುತ್ತದೆ. ಅಣುಕು ಪರೀಕ್ಷೆಗೆ ಭಾಗವಹಿಸಿ ಯಶಸ್ಸು ಗಳಿಸುವವರೆಗೂ ಸಿದ್ಧತೆ ನಿರಂತರವಿರಬೇಕು. ನಿರಂತರ ಪ್ರಯತ್ನ ಮಾತ್ರ ನಿಮ್ಮ ಗುರಿ ಮುಟ್ಟಲು ಸಾಧ್ಯ’.

- ಎ. ದೇವರಾಜು, ಆಯುಕ್ತ, ಪುರಾತತ್ವ ಮತ್ತು ಪರಂಪರೆ ಇಲಾಖೆ