ಕ್ಯಾಸಿನಕೆರೆ ಅಕ್ವಡಕ್ ಶೀಘ್ರ ದುರಸ್ತಿಪಡಿಸಿ

| Published : Sep 19 2025, 01:00 AM IST

ಸಾರಾಂಶ

ತಾಲೂಕಿನ ಕ್ಯಾಸಿನಕೆರೆ ಮೂಲಕ ಹಾದುಹೋಗಿರುವ ಭದ್ರಾ ನಾಲೆಯ ಅಕ್ವಡಕ್ ಹಾಳಾಗಿದ್ದು, ದುರಸ್ತಿ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಅಕ್ವಡಕ್ ಹಾಳಾಗಿ 5 ದಿನಗಳಾಗಿವೆ. ದುರಸ್ತಿ ಕಾರ್ಯ ವಿಳಂಬದಿಂದ ಅಪಾರ ಪ್ರಮಾಣದ ನೀರು ಪೋಲಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ.ಸಿ. ತಿಪ್ಪೇಶ್ ಆರೋಪಿಸಿದರು.

- ನೀರು ಪೋಲು ತಡೆಯುವಂತೆ ಭಾರತೀಯ ಕಿಸಾನ್‌ ಸಂಘ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಕ್ಯಾಸಿನಕೆರೆ ಮೂಲಕ ಹಾದುಹೋಗಿರುವ ಭದ್ರಾ ನಾಲೆಯ ಅಕ್ವಡಕ್ ಹಾಳಾಗಿದ್ದು, ದುರಸ್ತಿ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಅಕ್ವಡಕ್ ಹಾಳಾಗಿ 5 ದಿನಗಳಾಗಿವೆ. ದುರಸ್ತಿ ಕಾರ್ಯ ವಿಳಂಬದಿಂದ ಅಪಾರ ಪ್ರಮಾಣದ ನೀರು ಪೋಲಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘದ ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ.ಸಿ. ತಿಪ್ಪೇಶ್ ಆರೋಪಿಸಿದರು.

ಇಲ್ಲಿನ ಭದ್ರಾ ಎಡದಂಡೆ ಜಲಾನಯನ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೋಮವಾರ ರೈತ ಮುಖಂಡರೊಂದಿಗೆ ತೆರಳಿ ಮನವಿ ಸಲ್ಲಿಸಿದರು. ಅಕ್ವಡಕ್ ಕಾಮಗಾರಿ ಖುದ್ದು ವೀಕ್ಷಿಸಿ, ಶೀಘ್ರ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು. ಭತ್ತದ ಬೆಳೆ ಈಗಾಗಲೇ ಒಣಗುವ ಹಂತಕ್ಕೆ ಬಂದಿದೆ. ದಿಗ್ಗೇನಹಳ್ಳಿಯಲ್ಲಿ ಭದ್ರಾ ಅಕ್ವಡಕ್ ಒಡೆದು ತಿಂಗಳ ಕಾಲ ತಡವಾಗಿ ನೀರು ಬಿಡಲಾಯಿತು. ಇದರಿಂದ ಎಕರೆಗೆ ಕೇವಲ 15 ಚೀಲ ಭತ್ತ ಬೆಳೆದಿದ್ದಾರೆ. ರೈತರಿಗೆ ತುಂಬಾ ನಷ್ಟವಾಗಿದೆ. ಬೆಳೆ ನಷ್ಟದ ಪರಿಹಾರವನ್ನೂ ಯಾರೂ ನೀಡಿಲ್ಲ. ಈಗಲೂ ಬೆಳೆ ನಷ್ಟವಾದರೆ ಪರಿಹಾರ ನೀಡುವವರು ಯಾರು ಎಂದು ಪ್ರಶ್ನಿಸಿದರು.

ಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ ಸುಮಾರು 42 ಅಕ್ವಡಕ್‌ಗಳು, ಗೇಟ್‌ಗಳು, ಕಟ್ಟೆಗಳು 50 ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗಿವೆ. ಅಧಿಕಾರಿಗಳು, ಶಾಸಕರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೆಕು. ಹಾಳಾಗಿರುವ ಅಕ್ವಡಕ್‌ಗಳು ಸೇರಿದಂತೆ ಇತರೆ ರಚನೆಗಳನ್ನು ನೀರು ಬಂದ್ ಆದಾಗ ರೈತರಿಗೆ ತೊಂದರೆ ಆಗದಂತೆ ಸರಿಪಡಿಸಿ, ಭದ್ರಾ ಕಾಲುವೆಯಲ್ಲಿ ನಿರಂತರ ನೀರು ಹರಿಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಹಾಲಸ್ವಾಮಿ, ಪದಾಧಿಕಾರಿಗಳಾದ ಮಲ್ಲೇಶ್ ಎಚ್.ಬಿ., ಸುರೇಶ್ ಬಿ.ಜಿ., ವೀರೇಶ್ ಎಚ್.ಬಿ., ಹನುಮಂತಪ್ಪ ಕೆ., ಚಂದ್ರಶೇಖರ್, ರುದ್ರೇಶ್, ದೇವೇಂದ್ರಪ್ಪ, ಬೆನಕೇಶ್, ದೇವರಾಜ್ ಇತರರು ಇದ್ದರು.

- - -

(ಕೋಟ್‌) ಕ್ಯಾಸಿನಕೆರೆ ಅಕ್ವಡಕ್ ದುರಸ್ತಿ ಅಧಿಕಾರಿಗಳು ವಿಳಂಬ ಮಾಡದೇ ತ್ವರಿತ ಗತಿಯಲ್ಲಿ ಮುಗಿಸಬೇಕು. ಕೆಳಭಾಗದ ರೈತರ ಬೆಳಗಳಿಗೆ ನೀರು ಬಿಡಬೇಕು. ಕ್ಯಾಸಿನಕೆರೆಯಿಂದ ಹೊನ್ನಾಳಿಯ ಗಡಿಭಾಗ ಗೊಲ್ಲರಹಳ್ಳಿಯವರೆಗೂ ಸಾವಿರಾರು ಎಕರೆ ಭತ್ತ ನಾಟಿ ಮಾಡಿದ್ದಾರೆ. ಸೂಕ್ತ ರೀತಿ ಸ್ಪಂದಿಸದಿದ್ದರೆ ರೈತರು ಬೀದಿಗೆ ಇಳಿದು ಪ್ರತಿಭಟಿಸಬೇಕಾಗುತ್ತದೆ.

- ಕೆ.ಸಿ. ತಿಪ್ಪೇಶ್‌, ತಾಲೂಕು ಅಧ್ಯಕ್ಷ.

- - -

-16ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆ ಮೂಲಕ ಹಾದುಹೋಗಿರುವ ಭದ್ರಾ ನಾಲೆಯ ಅಕ್ವಡಕ್ ಶೀಘ್ರ ದುರಸ್ತಿಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಹೊನ್ನಾಳಿ ತಾಲೂ ಅಧ್ಯಕ್ಷ ಕೆ.ಸಿ. ತಿಪ್ಪೇಶ್ ನೇತೃತ್ವದಲ್ಲಿ ರೈತರು ಇಲಾಖೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.