ಕನ್ನಡಪ್ರಭವಾರ್ತೆ ಬಂಟ್ವಾಳ
ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅನ್ನಛತ್ರ ಹಾಗೂ ನೂತನ ಸಭಾಂಗಣ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆಯಲ್ಲಿ ನಡೆಯಿತು.ಅನ್ನಛತ್ರ ಮತ್ತು ಸಭಾಂಗಣ ನಿರ್ಮಾಣ ಕಾಮಗಾರಿಗಳ ಪ್ರಸ್ತುತ ಹಂತ, ತಾಂತ್ರಿಕ ಅಂಶಗಳು, ಅಗತ್ಯ ಮೂಲಸೌಕರ್ಯ, ಕಾಮಗಾರಿ ಗುಣಮಟ್ಟ ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳೊಂದಿಗೆ ಸಮಗ್ರ ಚರ್ಚೆ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ರಾಜ್ಯದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ವರ್ಷಪೂರ್ತಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಭಕ್ತಾದಿಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಅನ್ನಛತ್ರ ಹಾಗೂ ಸಭಾಂಗಣವು ಅತ್ಯಂತ ಉಪಯುಕ್ತ ಯೋಜನೆಯಾಗಿದ್ದು, ಕಾಮಗಾರಿಯಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಹಾಗೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಮೊಕ್ತೇಸರ ಮಾಧವ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರ ಮೋಹನ್, ಇಂಜಿನಿಯರ್‌ಗಳಾದ ಲಕ್ಷ್ಮಣ್ ಪೂಜಾರಿ ಹಾಗೂ ಸುಪ್ರೀತ್ ಆಳ್ವ ಉಪಸ್ಥಿತರಿದ್ದು, ಕಾಮಗಾರಿಯ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಗಳನ್ನು ಸಭೆಗೆ ಸಲ್ಲಿಸಿದರು. ಸಭೆಯಲ್ಲಿ ಕಾಮಗಾರಿಯನ್ನು ಯೋಜನೆಯಂತೆ ಪೂರ್ಣಗೊಳಿಸಲು ಅಗತ್ಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಬಗ್ಗೆ ಚರ್ಚೆ ನಡೆಯಿತು.