ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ‘ಹಸಿರು ಸಂವಾದ’ ಅಭಿಯಾನಕ್ಕೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ‘ಹಸಿರು ಸಂವಾದ’ ಅಭಿಯಾನಕ್ಕೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಚಾಲನೆ ನೀಡಿಲಾಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪರ್ಯಾವರಣ ಸಂರಕ್ಷಣಾ ತಂಡ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳು, ಕೈಗಾರಿಕೆಗಳು ಮತ್ತು ಆಡಳಿತ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆರಂಭಗೊಂಡಿದ್ದು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಪರಿಸರ ಸಂರಕ್ಷಣೆಗೆ ಮಾದರಿಯಾಗುವ ಗುರಿ ಹೊಂದಿದೆ.
ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ದ.ಕ. ಜಿಪಂ ಉಪ ಕಾರ‍್ಯದರ್ಶಿ ಜಯಲಕ್ಷ್ಮೀ ರಾಯ್ಕೋಡ್ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಪರಸ್ಪರ ಸಂಬಂಧ ಹೊಂದಿದ್ದು, ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ. ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಚಪ್ಪಾಳೆಯ ಎರಡು ಕೈಗಳಂತೆ ಒಂದಾದಾಗ ಮಾತ್ರ ಅಭಿವೃದ್ಧಿ ಸದ್ದು ಮೂಡುತ್ತದೆ ಎಂದರು.ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಪರಿಸರಕ್ಕೂ ಸಾರ್ವಜನಿಕ ಆರೋಗ್ಯಕ್ಕೂ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಆಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಪರಿಸರದ ಬಗ್ಗೆ ಪ್ರತಿಯೊಬ್ಬರೂ ವೈಯಕ್ತಿಕ ಹೊಣೆಗಾರಿಕೆ ಹೊಂದಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಮೌಲ್ಯಾಧಾರಿತ ಕಾರ್ಯಕ್ರಮಗಳ ಮೂಲಕ ಮಾದರಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಶ್ಲಾಘಿಸಿದರು.ಪರ್ಯಾವರಣ ಸಂರಕ್ಷಣಾ ತಂಡದ ಪ್ರಾಂತ ಸಂಯೋಜಕ ವೆಂಕಟೇಶ್ ಸಂಗನಾಳ್ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಸ್ವಚ್ಛತಾ ಅಭಿಯಾನವಾಗಿರದೆ ಜನರ ಜೀವನಶೈಲಿಯಲ್ಲಿ ಬದಲಾವಣೆ ತರುವ ಸಾಮಾಜಿಕ ಚಳವಳಿಯಾಗಬೇಕು ಎಂದರು.
‘ಹಸಿರು ಸಂವಾದ’ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ. ಅದು ಪ್ರತಿ ಮನೆ ಮತ್ತು ಪ್ರತಿ ಗ್ರಾಮವನ್ನು ತಲುಪುವ ಜನಾಂದೋಲನವಾಗಿ ಮೂಡಿಬರಬೇಕು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕರಾವಳಿ ಕರ್ನಾಟಕವು ಒಂದು ಕಡೆ ಅರಬ್ಬಿ ಸಮುದ್ರ ಹಾಗೂ ಮತ್ತೊಂದು ಕಡೆ ವಿಶ್ವದ ಜೀವ ವೈವಿಧ್ಯದ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಅಪರೂಪದ ಭೌಗೋಳಿಕ ಪ್ರದೇಶವಾಗಿದೆ. ಇಂತಹ ಅಮೂಲ್ಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬನಾಗರಿಕನ ಮೇಲಿದೆ ಎಂದರು.
‘ಹಸಿರು ಸಂವಾದ’ ಅಭಿಯಾನದ ಕುರಿತು ವಿವರಣೆ ನೀಡಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್, ಸಾಂಪ್ರದಾಯಿಕ ಸ್ವಚ್ಛತಾ ಕಾರ್ಯಾಚರಣೆಗಳನ್ನು ಮೀರಿ, ತ್ಯಾಜ್ಯವು ನದಿಗಳ ಮೂಲಕ ಸಮುದ್ರ ಸೇರಿ ಮೈಕ್ರೋಪ್ಲಾಸ್ಟಿಕ್ ಆಗಿ ಪರಿವರ್ತನೆಯಾಗುವುದನ್ನು ತಡೆಯಲು ಮೂಲ ಹಂತದಲ್ಲೇ ವೈಜ್ಞಾನಿಕ ಹಾಗೂ ಸಮುದಾಯ ಆಧಾರಿತ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.ಕಾರ‍್ಯಕ್ರಮದಲ್ಲಿ ಪರ್ಯಾವರಣ ಸಂರಕ್ಷಣಾ ತಂಡದ ಜಯರಾಮ್ ಬೊಳ್ಳಾಜೆ, ಹೊಸದಿಂಗತ ಪತ್ರಿಕೆಯ ಸಿಇಒ ಪಿ.ಎಸ್. ಪ್ರಕಾಶ್, ಪರಿಸರ ವಿಜ್ಞಾನಿ ಡಾ. ಬಿನಿಷಾ ಪಿ., ಘನ ತ್ಯಾಜ್ಯ ನಿರ್ವಹಣಾ ತಜ್ಞ ಹಾಗೂ ‘ಫ್ರೆಂಡ್ಸ್ ಆಫ್ ಲೇಕ್ಸ್’ ಸಂಸ್ಥೆಯ ಸಂಸ್ಥಾಪಕ ರಾಮಪ್ರಸಾದ್, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅರ್ಜುನ ಕುಮಾರ್ ಇದ್ದರು.
ಹಸಿರು ಸಂವಾದ ಅಭಿಯಾನದ ಮಂಜುನಾಥ್ ಸ್ವಾಗತಿಸಿ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ನಿರೂಪಿಸಿದರು.