ಸಾರಾಂಶ
ಗೋಕರ್ಣ: ತದಡಿ- ಅಘನಾಶಿನಿ ನಡುವೆ ನಿತ್ಯ ಸಂಚರಿಸುವ ಬಾರ್ಜ್‌ನ ಸ್ಥಿತಿಗತಿ ಹಾಗೂ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದರು.
ಮೂಲ ಸೌಲಭ್ಯ, ಅಭಿವೃದ್ದಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ಕರ್ನಾಟಕ ಜಲಸಾರಿಗೆ ಮಂಡಳಿ ಇದೇ ಬಾರ್ಜ್‌ನ್ನು ದುರಸ್ತಿಗೊಳಿಸಿ ನಡೆಸಲು ಹರಾಜು ಕರೆದಿದೆ.ಸಂಪೂರ್ಣವಾಗಿ ಹಾಳಾಗಿರುವ ಬಾರ್ಜನ್ನು ದುರಸ್ತಿಗೊಳಿಸಿದರೂ ಅಪಾಯವಿದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ ಇಲಾಖೆಯೇ ಹರಾಜು ಪ್ರಕಟಣೆಯಲ್ಲಿ ನಮೂದಿಸದಂತೆ ದುರಸ್ತಿ ಸ್ಥಿತಿಯಲ್ಲಿರುವ ಬಾರ್ಜನ್ನು ಪ್ರಸ್ತುತ ಜನರನ್ನು ಕರೆತರುತ್ತಿದೆ. ತುಕ್ಕು ಹಿಡಿದು ತೂತು ಬೀಳುವ ಹಂತಕ್ಕೆ ತಲುಪಿರುವ ಬೋಟ್‍ನಲ್ಲಿ ನಿತ್ಯ ನೂರಾರು ಜನರು ತೆರಳುತ್ತಿದ್ದು, ಇವರ ಜೀವಾಪಾಯದ ಬಗ್ಗೆ ಕನ್ನಡಪ್ರಭವು ಜು. 12ರಂದು ದುರಸ್ತಿಯಲ್ಲಿರುವ ಮಿನಿ ಬಾರ್ಜ್ ನಿರ್ವಹಣೆಗೆ ಟೆಂಡರ್: ಆಕ್ರೋಶ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಇದರ ಪರಿಣಾಮ ಕರಾವಳಿ ಕಾವಲು ಪಡೆಯವರು ಜನರ ರಕ್ಷಣೆಯ ಸಲುವಾಗಿ ಖುದ್ದು ತಪಾಸಣೆ ನಡೆಸಿದ್ದಾರೆ. ಹಾಳಾದ ಬೋಟ್‍ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿರುವುದು ಕಂಡುಬಂದಿದ್ದು, ಬೋಟ್ ಸಂಪೂರ್ಣವಾಗಿ ಶಿಥಿಲಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಬಂದರು ಇಲಾಖೆಯ ನಿರೀಕ್ಷಕರು ಸೂಕ್ತ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಸುರಕ್ಷಾ ಕ್ರಮ ಅನುಸರಿಸಿಲ್ಲ: ಕಳೆದ ಕೆಲವು ದಿನಗಳ ಹಿಂದೆ ಇಲ್ಲಿ ಭೇಟಿ ನೀಡಿ ಹಲವು ಸೂಚನೆಗಳನ್ನು ನೀಡಿದ್ದೆ. ಪತ್ರಿಕಾ ವರದಿಯನ್ನು ಗಮನಿಸಿ ಪುನಃ ಪರಿಶೀಲನೆ ಮಾಡಿದ್ದು, ಬೋಟ್ ಹಾಳಾಗಿದ್ದು, ಅಲ್ಲದೇ ಸುರಕ್ಷತಾ ಕ್ರಮದ ಬಗ್ಗೆ ಗಮನ ಹರಿಸದಿರುವುದು ಸ್ಪಷ್ಟವಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಕರಾವಳಿ ಕಾವಲು ಪೊಲೀಸ್ ಪಡೆಯ ಕುಮಟಾ ಠಾಣೆಯ ಪಿಎಸ್ಐ ಅನೂಪ್ ನಾಯಕ ತಿಳಿಸಿದರು.