ವಿವಿಧ ಬೇಡಿಕೆ ಈಡೇರಿಕೆಗೆ ಪಾಲಿಟೆಕ್ನಿಕ್ ಕಾಲೇಜು ಅತಿಥಿ ಉಪನ್ಯಾಸಕರ ಒತ್ತಾಯ

| Published : Jul 26 2025, 12:30 AM IST

ವಿವಿಧ ಬೇಡಿಕೆ ಈಡೇರಿಕೆಗೆ ಪಾಲಿಟೆಕ್ನಿಕ್ ಕಾಲೇಜು ಅತಿಥಿ ಉಪನ್ಯಾಸಕರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸುವಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಶ್ರಮ ಅನನ್ಯವಾದುದು.

ಕನ್ನಡಪ್ರಭ ವಾರ್ತೆ ಗದಗ

ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಸಂಘದಿಂದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಯಶವಂತ ಆರೇರ, ಕೇವಲ ₹12,500ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ ₹5000, ₹6000, ₹7000, ₹8000ವರೆಗೆ ಹೆಚ್ಚಿಸಿದ್ದು ಮಾತ್ರವಲ್ಲದೇ ₹22 ಸಾವಿರ, ₹24 ಸಾವಿರ, ₹26 ಸಾವಿರ, ₹28 ಸಾವಿರವರೆಗೆ ಹೆಚ್ಚಿಸಲಾಯಿತು. ಇದರಿಂದ ಸುಮಾರು ₹38 ಸಾವಿರವರೆಗೆ ವೇತನ ಹೆಚ್ಚಳವಾದಂತಾಗಿದೆ. ಸಚಿವ ಡಾ.ಎಂ.ಸಿ. ಸುಧಾಕರ್‌ ಅವರ ಸ್ಪಂದನೆಯಿಂದಾಗಿ ವೇತನ ಹೆಚ್ಚಳವಾಗಿದೆ. ಆರೋಗ್ಯ ವಿಮೆ, ಐದು ಲಕ್ಷ ರು. ಇಡುಗಂಟು, ಮಾತೃತ್ವ ರಜೆ, ನೇಮಕಾತಿಯಲ್ಲಿ ಕೃಪಾಂಕ, ಕೌನ್ಸೆಲಿಂಗ್‌ನಲ್ಲಿ ಸರಳೀಕರಣ ಸೇರಿದಂತೆ ಹಲವು ಸವಲತ್ತುಗಳನ್ನು ನೀಡಿರುವುದು ಉಲ್ಲೇಖನೀಯ. ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸುವಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಶ್ರಮ ಅನನ್ಯವಾದುದು ಎಂದು ಹೇಳಿದರು.ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದೆ. ಇವು ಅತಿಥಿ ಉಪನ್ಯಾಸಕರ ಭದ್ರತೆ ಹಾಗೂ ಪ್ರೋತ್ಸಾಹದತ್ತ ತೆಗೆದುಕೊಳ್ಳಲಾದ ಮಹತ್ವದ ಹೆಜ್ಜೆಗಳಾಗಿವೆ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಸಂಘವು ಸಚಿವರು, ವಿಪ ಸದಸ್ಯರು, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ ಎಂದರು.

ಈ ಸಂದರ್ಭದಲ್ಲಿ ಸಂಘದಿಂದ ಸಚಿವ ಡಾ.ಎಂ.ಸಿ. ಸುಧಾಕರ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಂಘದ ಉಪಾಧ್ಯಕ್ಷ ಪ್ರವೀಣಕುಮಾರ ಬೇವಿನಕಟ್ಟಿ, ಕಾರ್ಯದರ್ಶಿ ವಿನೋದ ಎಚ್.ಎಸ್., ಜಂಟಿ ಕಾರ್ಯದರ್ಶಿ ವಿನೋದ ಬಾದವಾಡಗಿ, ಪದಾಧಿಕಾರಿಗಳಾದ ರಾಕೇಶ ಕಡಬಿನ, ಶ್ರೀಧರ ದಿವಾಣದ, ಅರ್ಚನಾ ನಾಯ್ಕ, ಅಂಜುಮ್ ಮೀರನಾಯಕ್, ಸುದರ್ಶನ ಕುಂದಗೋಳ, ಅರುಣಕುಮಾರ ಕೆ., ಭಾವನಾ, ಅಕ್ಷತಾ, ವಿನೋದಕುಮಾರ ಮರಿನಾಯಕರ್, ಸಿರಾಜ್, ಅಶೋಕ, ಶ್ರೀನಿವಾಸ, ಪ್ರಸನ್ನ, ಮೀರ್ ಮುಕ್ರಂ, ಗುರು ಕಾರಟಗಿ, ಡಾ.ತನುಜಾ, ಸುಪ್ರೀತಾ, ಬಾಳಮ್ಮ ಎಂ. ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.