ಕಲಬುರಗಿ ಸಚಿವರು, ಅಧಿಕಾರಿಗಳ ಒಂದು ದಿನದ ಇಂಧನಕ್ಕೆ ₹11 ಲಕ್ಷ

| Published : Jul 26 2025, 12:30 AM IST

ಸಾರಾಂಶ

ಕಲಬುರಗಿ ಮಹಾ ನಗರದಲ್ಲಿ 2024ರ ಸೆ. 17 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಫಲಾಫಲಗಳ ಸುತ್ತಮುತ್ತ ಇಂದಿಗೂ ಚರ್ಚೆಗಳು ನಡೆಯುತ್ತಿರುವಾಗಲೇ ಸಂಪುಟ ಸಭೆಯ ಈ ಒಂದೇ ದಿನ ನಗರದಲ್ಲಿ ಸುತ್ತಾಡಿರುವ ಸಚಿವರು, ಅಧಿಕಾರಿಗಳ ವಾಹನಗಳಿಗೆ ಪೆಟ್ರೋಲ್‌ ಹಾಗೂ ಡೀಸಲ್‌ಗಾಗಿ ಬರೋಬ್ಬರಿ 11.56 ಲಕ್ಷ ರುಪಾಯಿ ವಿನಿಯೋಗಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಮಹಾ ನಗರದಲ್ಲಿ 2024ರ ಸೆ. 17 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಫಲಾಫಲಗಳ ಸುತ್ತಮುತ್ತ ಇಂದಿಗೂ ಚರ್ಚೆಗಳು ನಡೆಯುತ್ತಿರುವಾಗಲೇ ಸಂಪುಟ ಸಭೆಯ ಈ ಒಂದೇ ದಿನ ನಗರದಲ್ಲಿ ಸುತ್ತಾಡಿರುವ ಸಚಿವರು, ಅಧಿಕಾರಿಗಳ ವಾಹನಗಳಿಗೆ ಪೆಟ್ರೋಲ್‌ ಹಾಗೂ ಡೀಸಲ್‌ಗಾಗಿ ಬರೋಬ್ಬರಿ 11.56 ಲಕ್ಷ ರುಪಾಯಿ ವಿನಿಯೋಗಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಸಂಪುಟ ಸಭೆಗೆಂದು ಕಲಬುರಗಿಗೆ ಬಂದ ಸಚಿವರು, ಅಧಿಕಾರಿಗಳು, ಗಣ್ಯರಿಗೆ, ಸಂಪುಟ ಸಭೆ ಸಿದ್ದತೆಗೆಂದು ಕಲಬುರಗಿಗೆ ಬಂದಿದ್ದ ಜಿಲ್ಲೆಯ ಡಿವಿ ವಾಹನಗಳಿಗೆ ಇಂಧನ ವೆಚ್ಚವೆಂದು 11. 56 ಲಕ್ಷ ರು. ವೆಚ್ಚ ಮಾಡಲಾಗಿರುವ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದಲೇ ದಾಖಲೆ ಬಿಡುಗಡೆಯಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ 2024ರ ಕಲಬುರಗಿ ಸಂಪುಟ ಸಭೆಯ ಸಕಲ ವೆಚ್ಚಗಳ ಬಗ್ಗೆ ಕೇಳಿದ್ದ ಮಾಹಿತಿ ಅರ್ಜಿಯಂತೆ ಜಿಲ್ಲಾಡಳಿತ ಇದೀಗ ಕೇವಲ ವಾಹನಗಳ ವೆಚ್ಚದ ಬಾಬ್ತಿನ ಮಾಹಿತಿ ಮಾತ್ರ ನೀಡಿದ್ದು ಅದರ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಈ ಖರ್ಚು ವೆಚ್ಚದಲ್ಲಿ ಹಲವು ಸೋಜಿಗಗಳು ಗೋಚರವಾಗಿದ್ದು ವಾಹನಗಳ ಇಂಧನ ಬಿಲ್‌ ಸುತ್ತಲೇ ಹಲವು ಗುಮಾನಿ ಹುಟ್ಟು ಹಾಕಿದೆ.

ಒಂದೊಂದು ವಾಹನಕ್ಕೆ 1 ಲಕ್ಷ ರು. ವರೆಗೂ ಡೀಸೆಲ್‌!

ಸಂಪುಟ ಸಭೆಗೆ ಆಗಮಿಸಿದ್ದ ಸಚಿವರು, ಅಧಿಕಾರಿ, ಗಣ್ಯರ ವಾಹನಗಳು,. ಡಿವಿ ವಾಹನಗಳಿಗೆ ಸ್ಥಳಯವಾಗಿ ಪ್ರಿಮಿಯರ್‌ ಏಜನ್ಸಿಯವರು ಇಂಧನ ಪೂರೈಸಿದ್ದು ಅದರಂತೆ 1096ರಿಂದ 1142ರ ವರೆಗೆ ಒಟ್ಟು 16 ಅನುಕ್ರಮ ಸಂಖ್ಯೆಯಲ್ಲಿ ಹಲವು, ಸರ್ಕಾರಿ ವಾಹನಗಳ ನಂಬರ್‌ ಸಹ ನಮೂದಿಸಿ ಬಿಲ್‌ ಸಲ್ಲಿಸಿರುವುದನ್ನು ಜಿಲ್ಲಾಡಳಿತ ವಿವರಿಸಿದೆ.

ಇಂಧನ ಬಿಲ್‌ ಸುತ್ತ ಪ್ರಶ್ನೆಗಳ ಹುತ್ತ

ಸಂಪುಟ ಸಭೆಯ ದಿನ ಬಳಕೆಯಾದ ವಾಹನಗಳು, ಇಂಧನ ವೆಚ್ಚದ ಬಿಲ್‌ ಮೇಲೋಮ್ಮೆ ಕಣ್ಣಾಡಿಸಿದರೆ ಸಾಕು, ಈ ಪರಿ ವಾಹನಗಳ ಸುತ್ತಾಟ ನಡೆದದ್ದೆಲ್ಲಿ? ಎಂಬ ಪ್ರಶ್ನೆ ಕಾಡದಿರದು.

ಸದರಿ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ 11, 770 ಕೋಟಿ ರು. ಅನುದಾನ ಬಂಪರ್‌ ರೂಪದಲ್ಲಿ ಘೋಷಿಸಲ್ಪಟ್ಟಿತ್ತು. ಈ ಪೈಕಿ ಅನೇಕ ಯೋಜನೆಗಳು ಅದಾಗಲೇ ವಿವಿಧ ಇಲಾಖೆಯಡಿಯಲ್ಲಿ ಘೋಷಿತ ಯೋಜನೆಗಳೇ ಎಂದು ಟೀಕೆಗೂ ಗುರಿಯಾಗಿದ್ದವು. ಸಂಪುಟ ಸಭೆಯ ಒಂದೇ ದಿನ ಇಷ್ಟು ಹಣ ಖರ್ಚಾಗಿರುವುದು ಗಂಭೀರ ಚರ್ಚೆ ಹುಟ್ಟು ಹಾಕಿದೆ.

ಸಂಪುಟ ಸಭೆ ನಡೆದ 20224 ರ ಸೆ. 17 ರ ಒಂದೇ ದಿನಕ್ಕೆ ವಿವಿಧ ವಾಹನಗಲಿಗೆ 11. 56 ಲಕ್ಷ ರುಪಾಯಿ ಇಂಧನ ಭರಿಸಿರೋದು ಮಾತ್ರ ಸೋಜಿಗವಾಗಿದೆ. ಕೆಲವು ವಾಹನಗಲಿಗೆ ಲಕ್ಷದಿಂದ ಹಿಡಿದು 37, 36 ಸಾವಿರ ರು.ದಷ್ಟು ಇಂಧನ ಒಂದೇ ದಿನ ಭರಿಸಲಾಗಿದೆ. ಈ ಪರಿ ಇಂಧನ ಹಾಕಿಸಿಕೊಂಡು ಈ ವಾಹನಗಳು ಹೋಗಿಬಂದಿದ್ದೆಲ್ಲಿ? ಸಾರ್ವಜನಿಕರ ತೆರಿಗೆ ಹಣವೇ ಇಲ್ಲಿ ವೆಚ್ಚವಾಗಿದೆ.

ಸಿದ್ದರಾಮಯ್ಯ ಹಿರೇಮಠ, ಆರ್‌ಟಿಐ ಕಾರ್ಯಕರ್ತ, ಕಲಬುರಗಿ.