ಪೊನ್ನಂಪೇಟೆ: ಅಪ್ಪಚ್ಚಕವಿ ಕೊಡವ ಕೂಟ ಬೆಳ್ಳಿ ಹಬ್ಬ

| Published : May 02 2025, 11:45 PM IST

ಸಾರಾಂಶ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಅವರನ್ನು ಮೆರವಣಿಗೆಯಲ್ಲಿ ದುಡಿ ಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್‌ನೊಂದಿಗೆ ಸಮಾರಂಭಕ್ಕೆ ವಿಶೇಷ ಗೌರವದೊಂದಿಗೆ ಕರೆತರಲಾಯಿತು. ವಿವಿಧ ಪೈಪೋಟಿ, ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಗಮನ ಸೆಳೆದ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಪೊನ್ನಂಪೇಟೆ ಅಪ್ಪಚ್ಚ ಕವಿ ಕೊಡವ ಕೂಟಕ್ಕೆ ಇಪ್ಪತ್ತೈದು ವರ್ಷ ತುಂಬಿದ ಪ್ರಯುಕ್ತ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಅವರನ್ನು ಮೆರವಣಿಗೆಯಲ್ಲಿ ದುಡಿ ಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್‌ನೊಂದಿಗೆ ಸಮಾರಂಭಕ್ಕೆ ವಿಶೇಷ ಗೌರವದೊಂದಿಗೆ ಕರೆತರಲಾಯಿತು. ವಿವಿಧ ಪೈಪೋಟಿ, ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಬಾಚೀರ ಕಾರ್ಯಪ್ಪ, 2000ರಲ್ಲಿ ಪೊನ್ನಂಪೇಟೆಯಲ್ಲಿ ನಮ್ಮ ಹಿರಿಯರು ಸೇರಿ ದೂರ ದೃಷ್ಟಿಯಿಂದ ನಮ್ಮಲ್ಲಿ ಒಗ್ಗಟ್ಟು ಮೂಡಿಸಲು, ಆಚಾರ ವಿಚಾರ ಕಾಪಾಡಲು ಹಾಗೂ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಕಟ್ಟಿದ ಕೊಡವ ಕೂಟದಿಂದ ಪರಸ್ಪರ ಸಹಕಾರ ಮನೋಭಾವದಲ್ಲಿ ಕಷ್ಟ ಸುಖಕ್ಕೆ ಭಾಗಿಯಾಗುತ್ತಿದ್ದು, ಅಂದು ಚಿಕ್ಕದಾಗಿ ಸ್ಥಾಪನೆಯಾದ ಸಂಘ ಇಂದು ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಪರಸ್ಪರ ಹೆಚ್ಚಿನ ಸಹಕಾರ ಮನೋಭಾವವನ್ನು ಗಟ್ಟಿಗೊಳಿಸಿದೆ. ಅಂದು ಈ ಸಂಘವನ್ನು ಕಟ್ಟಲು ಕಾರಣಕರ್ತರಾದ ಎಲ್ಲರನ್ನೂ ಅವರು ಈ ಸಂದರ್ಭ ಶ್ಲಾಘಿಸಿದರು.

ನಮ್ಮ ಭೂತಕಾಲವನ್ನು ಮರೆತರೆ ನಮಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದೆ ಹೋದರೂ ನಮ್ಮ ಸನಾತನ ಧರ್ಮದಡಿ ಧರ್ಮ, ಆಚಾರ ವಿಚಾರವನ್ನು ಪಾಲನೆ ಮಾಡಿಕೊಂಡು ಬರುವಂತೆ ಕರೆ ನೀಡಿದರು

ತಪಸ್ಯ ಶಾಲೆಯ ಪ್ರಾಂಶುಪಾಲರಾ ಚೊಟ್ಟೆಕಾಳಪಂಡ ಬಿಂದು ಕಾವೇರಪ್ಪ ಮಾತನಾಡಿ, ಕೊಡವ ಜನಾಂಗದಲ್ಲಿ ಜನಸಂಖ್ಯೆ ಜಾಸ್ತಿ ಆಗಬೇಕು. ಜನಸಂಖ್ಯೆ ಕಡಿಮೆಯಾದರೆ, ನಮ್ಮ ಹಕ್ಕು, ನಮ್ಮ ಭೂಮಿಯನ್ನು ನಾವು ಕಳೆದುಕೊಳ್ಳುತ್ತೇವೆ. ಭವಿಷ್ಯದ ಹಲವಾರು ವರ್ಷದ ಸ್ಥಿತಿಗತಿಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಸಮಸ್ಯೆಗಳಿಗೆ ಈಗ ಪರಿಹಾರ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದವರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾದಂತಹ ಹಿರಿಯ ಸಮಾಜ ಸೇವಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ನಾನು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಲಿಲ್ಲ. ಸೇವೆ -ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡುವುದರಿಂದ ನಮ್ಮ ಯುವ ಪೀಳಿಗೆಗೆ ಹಾಗೂ ಇತರರಿಗೆ ನಾವು ಸಹ ಸೇವೆ -ಸಾಧನೆ ಮಾಡಬೇಕೆನ್ನುವ ಮನೋಭಾವ ಬೆಳೆಯುತ್ತದೆ. ಸೇವೆ, ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪ್ಪಚ್ಚ ಕವಿ ಕೊಡವ ಕೂಟದ ಅಧ್ಯಕ್ಷ ಕೋಳೆರ ಎಸ್.ನರೇಂದ್ರ, ಕೊಡವ ಕೂಟ ಸ್ಥಾಪನೆ ಕೇವಲ ಔತಣಕೂಟಕ್ಕೆ ಸೀಮಿತವಾಗದೆ, ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಕೂಟದ ಕಾರ್ಯದರ್ಶಿ ಚೆಟ್ಟಂಗಡ ಅಶ್ವಿನಿ ಪೂವಯ್ಯ ವಾರ್ಷಿಕ ವರದಿ ಮಂಡಿಸಿದರು.

ವೇದಿಕೆಯಲ್ಲಿ ಖಜಾಂಚಿ ಐನಂಡ ಬೇಬಿ ತಮ್ಮಯ್ಯ, ನಿರ್ದೇಶಕರಾದ ಚೀರಂಡ ಸುನಿಲ್ ದೇವಯ್ಯ, ಮೂಕಳಮಾಡ ಹರೀಶ್ ಉತ್ತಯ್ಯ, ಪೊನ್ನಿಮಾಡ ಜಪ್ಪು, ಕಡೆಮಾಡ ಸತೀಶ್, ಅಜ್ಜಿಕುಟ್ಟಿರ ಶುಭ ಬೋಪಣ್ಣ, ಕುಪ್ಪಣಮಾಡ ಸಂತೋಷ್ ಉತ್ತಪ್ಪ, ಐನಂಡ ಪ್ರತಿಮ ಸೋಮಣ್ಣ, ಅಜ್ಜಿಕುಟ್ಟಿರ ಮನು ರತ್ನ ಹಾಜರಿದ್ದರು.

ಕೂಟದಲ್ಲಿ ಇದುವರೆಗೂ ಸೇವೆ ಸಲ್ಲಿಸಿದ್ದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕೂಟದ ಸದಸ್ಯರಿಂದ ಉಮ್ಮತಾಟ್, ಕೊಡವ ನೃತ್ಯ, ಚೆಟ್ಟಂಗಡ ಲೇಖನ ಅವರ ಭರತ ನಾಟ್ಯ ಪ್ರದರ್ಶನ ಹಾಗೂ ಕೂಟದ ಸದಸ್ಯರಿಗೆ ಕ್ರೀಡಾ ಪೈಪೋಟಿ ನಡೆಯಿತು.