ಮೈಸೂರು ಮಂಡ್ಯ ರಾಜಕಾರಣಿಗಳು ಅಭಿವೃದ್ಧಿ ವಿಷಯದಲ್ಲಿ ಹೆಚ್ಚು ಸಾಮ್ಯತೆಗಳು ಹೊಂದಿದ್ದರು: ಬಿ.ಎಲ್.ಶಂಕರ್

| Published : May 02 2025, 11:45 PM IST

ಮೈಸೂರು ಮಂಡ್ಯ ರಾಜಕಾರಣಿಗಳು ಅಭಿವೃದ್ಧಿ ವಿಷಯದಲ್ಲಿ ಹೆಚ್ಚು ಸಾಮ್ಯತೆಗಳು ಹೊಂದಿದ್ದರು: ಬಿ.ಎಲ್.ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಈಗೀನ ರಾಜಕಾರಣಿಗಳಿಗೆ ಅಭಿವೃದ್ಧಿ ಕೆಲಸಗಳಿಗಿಂತ ಶಬ್ಧ ಮಾಲಿನ್ಯ ಹೆಚ್ಚಾಗಿದೆ. ಶಾಸನ ಸಭೆ ಒಳಗೆ ಮತ್ತು ಹೊರಗೆ ಅನಾವಶ್ಯಕ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿವೆ. ರೈತರು ಮತ್ತು ಜನರಿಗೆ ಬೇಕಾದ ಕೆಲಸಗಳ ಬಗ್ಗೆ ಚರ್ಚೆಯಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಎಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರೇಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ ಸೇರಿದಂತೆ ಮೈಸೂರು ಮಂಡ್ಯ ರಾಜಕಾರಣಿಗಳು ಆಡಳಿತಾವಧಿ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಹೆಚ್ಚು ಸಾಮ್ಯತೆಗಳು ಹೊಂದಿದ್ದರು. ಈಗೀನ ರಾಜಕಾರಣಿಗಳಲ್ಲಿ ಇದನ್ನು ಕಾಣದಿರುವುದು ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಮಾಜಿ ಸಚಿವ, ಚಿತ್ರ ಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದಿಂದ ನಡೆದ ಸೇವಾ ದುರೀಣ ಎಚ್.ಕೆ.ವೀರಣ್ಣಗೌಡರ 127 ನೇ ಜಯಂತಿ ಹಾಗೂ ಮಾಹಿತಿ ತಂತ್ರಜ್ಞಾನದ ಹರಿಕಾರ ಎಸ್.ಎಂ.ಕೃಷ್ಣರ 94ನೇ ಜಯಂತಿ ಹಾಗೂ ಡಾ.ಶಾಂತ ಮರಿಯಪ್ಪ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಈಗೀನ ರಾಜಕಾರಣಿಗಳಿಗೆ ಅಭಿವೃದ್ಧಿ ಕೆಲಸಗಳಿಗಿಂತ ಶಬ್ಧ ಮಾಲಿನ್ಯ ಹೆಚ್ಚಾಗಿದೆ. ಶಾಸನ ಸಭೆ ಒಳಗೆ ಮತ್ತು ಹೊರಗೆ ಅನಾವಶ್ಯಕ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿವೆ. ರೈತರು ಮತ್ತು ಜನರಿಗೆ ಬೇಕಾದ ಕೆಲಸಗಳ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದರು.

ಕೀರ್ತಿಶೇಷರಾದ ಎಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರೇಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ ಹಾಗೂ ಮೈಸೂರು ಭಾಗದ ರಾಜಕಾರಣಿಗಳಾದ ಎಚ್.ಸಿ.ದಾಸಪ್ಪ, ಯಶೋಧರಮ್ಮ ದಾಸಪ್ಪ ಸೇರಿದಂತೆ ಅನೇಕ ರಾಜಕಾರಣಿಗಳಲ್ಲಿ ಆತ್ಮೀಯತೆ ಇತ್ತು. ಇವರ ನಡುವೆ ಯಾವುದೇ ರೀತಿಯ ದಕ್ಕೆ ಬಂದಿರಲಿಲ್ಲ ಎಂದರು.

ಎಚ್.ಕೆ.ವೀರಣ್ಣಗೌಡರು ಉತ್ತಮ ಸಮಾಜ ಸೇವಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಸಚಿವರಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗಮನಾರ್ಹ ಸೇವೆ ಮಾಡಿ ನಾಯಕರೆನಿಸಿಕೊಂಡು ಹಲವು ನಾಯಕರನ್ನು ಬೆಳೆಸಿದ್ದಾರೆ. ಅದು ಅವರ ನಿಜವಾದ ಅಪೂರ್ವ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಎಸ್.ಎಂ ಕೃಷ್ಣ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಜನಿಸಿ ಅತ್ಯುತ್ತಮ ರಾಜಕಾರಣಿಯಾಗಿ ಮುಖ್ಯಮಂತ್ರಿಯಷ್ಟೇ ಅಲ್ಲದೇ ಕೇಂದ್ರ ಸಚಿವ ಹಾಗೂ ರಾಜ್ಯಪಾಲರಾಗಿ ಮಾಡಿರುವ ಸೇವೆಯನ್ನು ನಾಡು ಎಂದಿಗೂ ಮರೆಯದು ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಎಚ್.ಕೆ.ವೀರಣ್ಣಗೌಡರು ಹಾಗೂ ಎಸ್.ಎಂ.ಕೃಷ್ಣ ಅವರು ಹಲವು ರೀತಿಯ ಕೊಡುಗೆಗಳನ್ನು ನೀಡಿ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಚಂದು, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಖಜಾಂಚಿ ಜಿ.ಎಸ್.ಶಿವರಾಮ್, ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ನಿವೃತ್ತ ಪ್ರಾಂಶುಪಾಲ ಜಿ.ಎಸ್.ಶಂಕರೇಗೌಡ, ಪ್ರಾಂಶುಪಾಲರಾದ ಪ್ರಕಾಶ್, ಜಿ.ಎನ್.ಸುರೇಂದ್ರ, ಉಪ ಪ್ರಾಂಶುಪಾಲೆ ಜಿ.ಎಸ್.ನಂದಿನಿ ಇದ್ದರು.