ಸಾರಾಂಶ
ಕೊಡಗು-ಕೇರಳ ಗಡಿ ಭಾಗದಲ್ಲಿ ಅಸುರಕ್ಷಿತವಾದ ಆಹಾರ ಪದಾರ್ಥ ಸಾಗಾಟವಾಗುತ್ತಿದೆ ಎಂದು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳೊಂದಿಗೆ ವಿಧಾನ ಸೌಧ ಕಚೇರಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ತುರ್ತು ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೂಡಲೇ ಅಸುರಕ್ಷಿತ ಆಹಾರ ಪದಾರ್ಥಗಳನ್ನು ನಿಷೇಧಿಸಲು ಹಾಗೂ ಅಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ತಡೆಯಲು ಅಧಿಕಾರಿಗಳಿಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ.ಕೊಡಗು-ಕೇರಳ ಗಡಿ ಭಾಗದಲ್ಲಿ ಅಸುರಕ್ಷಿತವಾದ ಆಹಾರ ಪದಾರ್ಥ ಸಾಗಾಟವಾಗುತ್ತಿದೆ ಎಂದು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿಗಳೊಂದಿಗೆ ವಿಧಾನ ಸೌಧ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ಶಾಸಕ ಈ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆ ಹಾಗೂ ಕೇರಳ ಜಿಲ್ಲೆ ಗಡಿಭಾಗ ಕುಟ್ಟ, ಮಾಕುಟ್ಟ ಮತ್ತು ಪೆರುಂಬಾಡಿ ವ್ಯಾಪ್ತಿಯಲ್ಲಿ ಕೇರಳದ ಆಹಾರ ಪದಾರ್ಥಗಳು ಸರಬರಾಜುವಾಗುತ್ತಿವೆ. ಆಹಾರ ಪದಾರ್ಥಗಳಲ್ಲಿ ತಯಾರಿಕಾ ದಿನಾಂಕ ಹಾಗೂ ತಯಾರಿಕೆ ಮಾಡುವವರ ವಿವರ, ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಕೃತಕ ಬಣ್ಣಗಳನ್ನು ಸೇರಿಸಿರುವುದರ ಬಗ್ಗೆ 90 ಆಹಾರ ಪದಾರ್ಥಗಳನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಗಳಲ್ಲಿ 31 ಆಹಾರ ಮಾದರಿಗಳು ಅಸುರಕ್ಷಿತವೆಂದು, 4 ಆಹಾರ ಮಾದರಿಯಲ್ಲಿ ಕಡಿಮೆ ಗುಣಮಟ್ಟವಿದೆ ಎಂದು ದೃಢವಾಗಿರುತ್ತದೆ ಎಂದು ಅಂಕಿತ ಅಧಿಕಾರಿಗಳು ವಿವರಿಸಿದರು.ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆ ಅಂಕಿತಾಧಿಕಾರಿ ಡಾ. ಅನಿಲ್ ದಾವನ್ ಮತ್ತಿತರರು ಹಾಜರಿದ್ದರು.
ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ:ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ ಮೇರೆಗೆ ಕೊಡಗಿನ ಮಾಕುಟ್ಟ ಚೆಕ್ ಪೋಸ್ಟ್ ಹಾಗು ಇನ್ನಿತರ ಕಡೆ ಆಹಾರ ಇಲಾಖೆ ಅಧಿಕಾರಿಗಳು ಅಂಕಿತ ಅಧಿಕಾರಿ ಡಾ. ಅನಿಲ್ ಧವನ್ ನೇತೃತ್ವದಲ್ಲಿ ತಪಾಸಣೆ ಕೈಗೊಂಡರು. ಕೇರಳದಿಂದ ಹಲವು ವಾಹನಗಳಲ್ಲಿ ಕೊಡಗು ಜಿಲ್ಲೆಗೆ ಸರಬರಾಜು ಆಗುತ್ತಿರುವ ಆಹಾರ ಉತ್ಪನ್ನಗಳನ್ನು ಪರಿಶೀಲಿಸಿ ಬಳಿಕ ಹಲವು ಅಂಗಡಿಗಳಿಗೆ ತೆರಳಿ ನಿಷೇಧಿತ ಆಹಾರ ಪದಾರ್ಥಗಳನ್ನುಮಾರಾಟ ಮಾಡದಂತೆ ಸೂಚನೆ ನೀಡಿದರು.