ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಫಲಿತಾಂಶ: ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

| Published : May 07 2025, 12:53 AM IST

ಎಸ್ಸೆಸ್ಸೆಲ್ಸಿಯಲ್ಲಿ ಕಳಪೆ ಫಲಿತಾಂಶ: ಶಾಲೆಗೆ ಬೀಗ ಜಡಿದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಕೊಠಡಿಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಗ್ರಾಮಸ್ಥರು

ಪರೀಕ್ಷೆ ಬರೆದ 90 ವಿದ್ಯಾರ್ಥಿಗಳಲ್ಲಿ 50ಕ್ಕೂ ಹೆಚ್ಚು ಜನ ಅನುತ್ತೀರ್ಣ । 280 ಮಕ್ಕಳಿಗೆ ಮೂವರೇ ಶಿಕ್ಷಕರುಕನ್ನಡಪ್ರಭ ವಾರ್ತೆ ಸಿರಿಗೆರೆ

ಜಿಲ್ಲೆಯ ಶಿಕ್ಷಣ ಇಲಾಖೆ ನಿರೀಕ್ಷಿಸಿದ್ದಷ್ಟು ಫಲಿತಾಂಶ ಬಾರದೇ ಇರುವುದರಿಂದ ಕಂಗೆಟ್ಟಿರುವ ಸಂದರ್ಭದಲ್ಲಿಯೇ ಸಮೀಪದ ವಿಜಾಪುರ ಗ್ರಾಮದ ಖಾಸಗಿ ಪ್ರೌಢಶಾಲೆಯ ಕಳಪೆ ಫಲಿತಾಂಶದಿಂದ ಸಿಟ್ಟಿಗೆದ್ದಿರುವ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ.

ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಅಹವಾಲು ಕೇಳಬೇಕು. ಅಲ್ಲಿಯವರೆಗೆ ಶಾಲೆಗೆ ಬೀಗ ಹಾಕಲಾಗುವುದು ಎಂದು ಘೋಷಣೆ ಕೂಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಈ ಶಾಲೆಯಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಬಂದಿದೆ ಎಂಬುದು ಗ್ರಾಮದ ಪೋಷಕರ ಅಳಲು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 90 ವಿದ್ಯಾರ್ಥಿಗಳಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹಲವು ವಿದ್ಯಾರ್ಥಿಗಳು ಒಂದೇ ಒಂದು ವಿಷಯದಲ್ಲಿಯೂ ಉತ್ತೀರ್ಣರಾಗಿಲ್ಲ. ಇಂತಹ ಶೋಚನೀಯ ಸ್ಥಿತಿ ಈ ಶಾಲೆಯ ಮಕ್ಕಳದ್ದಾಗಿದೆ.

ವಿಜಾಪುರ ಗ್ರಾಮದಿಂದ 2 ಕಿಮೀ ದೂರದಲ್ಲಿರುವ ಲಕ್ಷ್ಮೀಸಾಗರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. ಅಲ್ಲಿಯ ಫಲಿತಾಂಶ ಚೆನ್ನಾಗಿಯೇ ಬಂದಿದೆ. ಅಲ್ಲಿ ಎಲ್ಲ ವಿಷಯಗಳ ಶಿಕ್ಷಕರೂ ಇದ್ದಾರೆ. ಆದ್ದರಿಂದ ನಮ್ಮೂರಲ್ಲಿನ ಈ ಶಾಲೆಯನ್ನು ಮುಚ್ಚಿಸಿ ಅಲ್ಲಿಗೆ ಹೋಗುವುದೇ ಲೇಸೆಂದು ಪ್ರತಿಭಟನಕಾರರು ಪ್ರತಿಭಟಿಸಿದ್ದಾರೆ.

ಶಾಲೆಯ 8ನೇ ತರಗತಿಯಲ್ಲಿ 76, 9ನೆಯ ತರಗತಿಯಲ್ಲಿ 96 ಹಾಗೂ 10ನೇ ತರಗತಿಯಲ್ಲಿ 116 ಮಕ್ಕಳು ಓದುತ್ತಿದ್ದಾರೆ. ಪ್ರತಿ ತರಗತಿಯಲ್ಲಿಯೂ 2 ವಿಭಾಗಳಂತೆ ಒಟ್ಟು 6 ವಿಭಾಗಗಳಿವೆ. ಆದರೆ ಇಲ್ಲಿರುವ ಶಿಕ್ಷಕರ ಸಂಖ್ಯೆ ಮಾತ್ರ ಕೇವಲ ಮೂರು. ಈ ಮೂವರು ಶಿಕ್ಷಕರು 280 ಮಕ್ಕಳಿಗೆ ಬೋಧಿಸಿ ಮಾರ್ಗದರ್ಶನ ಮಾಡುವ ದುರಂತ ಒದಗಿದೆ.

ಶಾಲೆಯಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಲವು ಭಾರಿ ಶಾಲೆಗೆ ಭೇಟಿ ನೀಡಿ ಈ ವಿಚಾರವನ್ನು ಶಾಲಾಡಳಿತಕ್ಕೆ ಮುಟ್ಟಿಸಿದ್ದಾರೆ. ಆದರೂ ಯಾವ ಪ್ರಯತ್ನವನ್ನು ಮಾಡಿಲ್ಲ. ಇಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಗ್ರಂಥಾಲಯ ಸೌಲಭ್ಯ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ, ಮಕ್ಕಳಿಗೆ ಶೌಚಾಲಯ, ಪ್ರಯೋಗಾಲಯ ಸೌಲಭ್ಯಗಳು ಇಲ್ಲವೇ ಇಲ್ಲ. ಶಾಲೆಯವರು ನಡೆಸುತ್ತಿರುವ ಹಾಸ್ಟೆಲ್‌ನಲ್ಲಿಯೂ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಗ್ರಾಮದ ಸುನೀಲ್‌ ಹೇಳಿದ್ದಾರೆ.

ಹೀಗಿದ್ದರೂ ಶಾಲಾ ಆಡಳಿತ ಶೈಕ್ಷಣಿಕ ಬೆಳವಣಿಗೆ ಕಡೆಗೆ ಯಾವುದೇ ಗಮನ ಹರಿಸಲಿಲ್ಲ. ಸುಮಾರು 50 ವರ್ಷಗಳ ಹಿಂದೆ ಆರಂಭವಾಗಿರುವ ಈ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಫಲಿತಾಂಶ ಬಂದಿದೆ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳವಾರ ಬೆಳಗ್ಗೆ ಪೋಷಕರೊಂದಿಗೆ ನಡೆದ ಶಾಲಾ ಆಡಳಿತ ಸಭೆಯಲ್ಲಿ ಪೋಷಕರು ಮತ್ತೆ ಮಾತಿನ ಚಕಮಕಿ ನಡೆಸಿದ್ದಾರೆ. ಒಂದೇ ಒಂದು ವಿಷಯದಲ್ಲಿ ಪಾಸಾಗದ ಹಲವು ವಿದ್ಯಾರ್ಥಿಗಳು ಇದ್ದಾರೆ. ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಡಳಿತ ಮಂಡಳಿಯ ಪ್ರಮುಖರು ಹಾಗೂ ಗ್ರಾಮಸ್ಥರ ಸಭೆ ಕರೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ಮಾತನಾಡಿ, ಆಡಳಿತ ಮಂಡಳಿಯ ಪ್ರಮುಖರು ಊರಲ್ಲಿಲ್ಲದಿರುವುದರಿಂದ ಬೇರೆ ದಿನದಲ್ಲಿ ಅವರ ಸಭೆಯನ್ನು ಏರ್ಪಡಿಸಲಾಗುವುದು. 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳಿಗೆ ಪಾಠ-ಪ್ರವಚನಗಳನ್ನು ಆಯೋಜಿಸಲಾಗುವುದು. ಪರೀಕ್ಷೆ ತೆಗೆದುಕೊಳ್ಳುತ್ತಿರುವ ಮಕ್ಕಳು ಶಾಲಾ ಪಾಠಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.---

ಬಾಕ್ಸ:

6 ವಿಭಾಗಗಳಿಗೆ ಮೂವರು ಶಿಕ್ಷಕರು

ಈ ಶಾಲೆಯಲ್ಲಿ 6 ವಿಭಾಗಳಿದ್ದು 3 ಜನ ಶಿಕ್ಷಕರು ಮಾತ್ರವೇ ಇದ್ದಾರೆ. ಎಲ್ಲಾ ತರಗತಿಗಳಿಗೆ ಒಬ್ಬೊಬ್ಬ ಶಿಕ್ಷಕರಾದರೂ ಬೇಕೆಂದರೆ ಕನಿಷ್ಠ 6 ಜನ ಶಿಕ್ಷಕರು ಇರಬೇಕು. ಇಲ್ಲಿ 3ಜನ ಶಿಕ್ಷಕರು ಇರುವುದರಿಂದ ಉಳಿದ 3 ತರಗತಿಗಳ ಮಕ್ಕಳಿಗೆ ಹಬ್ಬವೋ ಹಬ್ಬ! ಎನ್ನುವಂತಾಗಿರುವುದು ವಿಷಷಾದದ ಸಂಗತಿ.