ಸಾರಾಂಶ
ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಕುಂದಾಪುರ ಕನ್ನಡದ ‘ಕಾಂಬ’ ೫ನೇ ಸಮಾವೇಶದ ಸಮಾರೋಪ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಕೋಟ
ಕುಂದಾಪುರ ಕನ್ನಡ ಎಂಬ ಗ್ರಾಮೀಣ ಸೊಗಡಿನ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿದಿಲ್ಲ, ಬದಲಾಗಿ ಕುಂದಾಪುರ ಕನ್ನಡ ಕರಾವಳಿ ಭಾಗದ ಜನರ ಬದುಕಾಗಿ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಸೋಮವಾರ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಕುಂದಾಪುರ ಕನ್ನಡದ ‘ಕಾಂಬ’ ೫ನೇ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕುಂದಾಪುರ ಕನ್ನಡ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಡಾ. ಅಣ್ಣಯ್ಯ ಕುಲಾಲ್ ದಂಪತಿಗೆ ಕುಂದಾಪುರ ಕನ್ನಡಿಗರ ಪರವಾಗಿ ಸನ್ಮಾನಿಸಿದ ಕೋಟ, ಮೊದಮೊದಲು ಕುಂದಾಪುರದ ಕನ್ನಡವನ್ನು ಸಾರ್ವಜನಿಕವಾಗಿ ಮಾತನಾಡಲು ತಡಕಾಡುತ್ತಿದ್ದ ದಿನಗಳಿದ್ದವು. ಇಂದಿನ ದಿನಗಳಲ್ಲಿ ಕುಂದಾಪುರ ಕನ್ನಡಕ್ಕೆ ತನ್ನದೇ ಆದ ಗೌರವ ಘನತೆಗಳು ಹೆಚ್ಚುತ್ತಿವೆ. ಆದ್ದರಿಂದ, ಕುಂದಾಪುರ ಕನ್ನಡವನ್ನು ಹೆಮ್ಮೆಯಿಂದ ಹಂಚಿಕೊಳ್ಳೋಣ ಎಂದು ಕರೆಯಿತ್ತರು.ಸಭೆಯಲ್ಲಿ ಉದ್ಯಮಿ ಆನಂದ್ ಸಿ. ಕುಂದರ್, ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್, ನರೇಂದ್ರ ಕುಮಾರ್ ಕೋಟ ಮುಂತಾದವರಿದ್ದರು.