ವಿಜಯಪುರ : ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರ ಶಾಸಕರ ಜನಸಂಪರ್ಕ ಕಚೇರಿಯ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರಿಗೆ ನಗರದ ಹಳೆ ಪ್ರವಾಸಿ ಮಂದಿರದ ಆವರಣದಲ್ಲಿರುವ ಕಟ್ಟಡದಲ್ಲಿ ನೀಡಲಾಗಿರುವ ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತವಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರ ಶಾಸಕರ ಜನಸಂಪರ್ಕ ಕಚೇರಿಯ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರಿಗೆ ನಗರದ ಹಳೆ ಪ್ರವಾಸಿ ಮಂದಿರದ ಆವರಣದಲ್ಲಿರುವ ಕಟ್ಟಡದಲ್ಲಿ ನೀಡಲಾಗಿರುವ ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕಡಿತವಾಗಿದೆ.ಶಾಸಕರಿಗೆ ನೀಡಿದ ಕಚೇರಿಯ ಕಟ್ಟಡ ಲೋಕೋಪಯೋಗಿ ಇಲಾಖೆಗೆ ಸೇರಿದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟಬೇಕಿತ್ತು. ಆದರೆ ಕಳೆದ ಹಲವು ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂ ಇಲಾಖೆ ಸಿಬ್ಬಂದಿ ಕಳೆದ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವನ್ನೆ ಕಟ್ ಮಾಡಿದ್ಧಾರೆ. ಬೇಸಿಗೆಯ ಬಿಸಿಲಿನಲ್ಲಿ ವಿದ್ಯುತ್ ಹಾಗೂ ಫ್ಯಾನ್ ಸಹ ಇಲ್ಲದೆ ಸಿಬ್ಬಂದಿ ಪರದಾಡುತ್ತಿದ್ಧಾರೆ. ಅಲ್ಲದೆ ಹಲವಾರು ವಿಚಾರಗಳಿಗಾಗಿ ಶಾಸಕರ ಭೇಟಿಗೆ ಬರುವ ಸಾರ್ವಜನಿಕರು ಸಹ ಪರದಾಡುವಂತಾಗಿದೆ.

ನಮಗೆ ನೀಡಿರುವ ಸರ್ಕಾರಿ ಕಚೇರಿಯು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಆ ವಿದ್ಯುತ್ ಬಿಲ್‌ನ್ನು ಅವರೇ ತುಂಬಬೇಕಿದೆ. ಕಳೆದ ಎರಡ್ಮೂರು ದಿನಗಳಿಂದ ನಾನು ಸಹ ಬೆಂಗಳೂರಿನಲ್ಲಿರುವುದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕರೆಮಾಡಿ ಕೇಳಿದ್ದೇನೆ. ಅವರು ₹28 ಸಾವಿರ ಬಿಲ್ ಬಾಕಿಯಿದ್ದು ಎರಡು ದಿನಗಳಲ್ಲಿ ತುಂಬುತ್ತೇವೆ ಎಂದು ತಿಳಿಸಿದ್ಧಾರೆ. ಇದರಲ್ಲಿ ನನ್ನದು ಯಾವುದೇ ಸಮಸ್ಯೆಯಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಸಮಸ್ಯೆ ಎದುರಾಗಿದೆ. ಶೀಘ್ರದಲ್ಲೇ ವಿದ್ಯುತ್ ಸಂಪರ್ಕ ಸಿಗಲಿದೆ.

- ವಿಠ್ಠಲ ಕಟಕದೊಂಡ, ನಾಗಠಾಣ ಶಾಸಕ