ದಲಿತ ಮತ್ತು ದೇವದಾಸಿ ಕುಟುಂಬದವರಿಗೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಕೂಡಲೇ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೇ ನೀಡುವವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ಹೇಳಿದರು.
ಕೊಟ್ಟೂರು: ಇಲ್ಲಿನ ಬಾಲಾಜಿ ಕನ್ ವೆನ್ಷನ್ ಹಾಲ್ ಮುಂಭಾಗದಲ್ಲಿ ಕಳೆದ 30 ವರ್ಷಗಳಿಂದ ಗುಡಿಸಲು ಹಾಕಿಕೊಂಡಿರುವ ದಲಿತ ಮತ್ತು ದೇವದಾಸಿ ಕುಟುಂಬದವರಿಗೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಕೂಡಲೇ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೇ ನೀಡುವವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ಹೇಳಿದರು.
ಮಂಗಳವಾರ ಇಲ್ಲಿನ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯಾವುದೇ ಬಗೆಯ ಫಾರಂ -3 ಇಲ್ಲದೇ ಇಲ್ಲಿನ ವಾಸಿಗರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ಮನೆಯ ಹಕ್ಕುಪತ್ರ ನೀಡುವಂತೆ ಸಾಕಷ್ಟು ಕೋರಿದರೂ ಪಪಂ ಆಡಳಿತ ನೀಡಿಲ್ಲ ಎಂದು ಆರೋಪಿಸಿದ ಅವರು ಈಗಲಾದರೂ ಹಕ್ಕು ಪತ್ರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಡಿ.ಎಸ್.ಎಸ್. ತಾಲೂಕು ಸಂಚಾಲಕ ಚಂದ್ರಶೇಖರ, ನಿವಾಸಿಗಳಾದ ಭಾರತಿ, ಕೊಟ್ರಮ್ಮ, ಹುಲಿಗೆಮ್ಮ, ಕಾಳಮ್ಮ, ಸರಸ್ವತಿ, ಹಾಲಮ್ಮ, ಮಲ್ಲಮ್ಮ, ಪ್ರದೀಪ ಮತ್ತಿತರರು ಇದ್ದರು.ವಿಬಿ ಜಿರಾಮ್‌ಜಿ ಕೆಲಸ ನೀಡುವಂತೆ ಗ್ರಾಪಂ ಮುಂದೆ ಪ್ರತಿಭಟನೆ
ಹೂವಿನಹಡಗಲಿ: ಮಳೆ ಇಲ್ಲದೇ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಕೂಡಲೇ ವಿಬಿ ಜಿರಾಮ್‌ಜಿ ಯೋಜನೆಯಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ತಾಲೂಕಿನ ಸೋಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿ ಕಾರ್ಮಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಸಂಘಟನೆಯ ಶಬ್ಬೀರ್ ಬಾಷ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದೇ ಬರಗಾಲ ಆವರಿಸಿದೆ. ಕಳೆದೆರಡು ತಿಂಗಳಿನಿಂದ ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲ. ಇದರಿಂದ ಅವರ ಜೀವನ ನಿರ್ವಹಣೆಯೇ ದೊಡ್ಡ ಸವಾಲು ಆಗಿದ್ದು, ಈ ಕೂಡಲೇ ಸಂಬಂಧ ಪಟ್ಟ ಪಿಡಿಒ ಮತ್ತು ತಾಪಂನ ವಿಬಿ ಜಿರಾಮ್‌ಜಿ ಸಹಾಯಕ ನಿರ್ದೇಶಕರು ಇತ್ತ ಗಮನ ಹರಿಸಿ, ಎನ್‌ಎಂಆರ್ ತೆಗೆದು ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.ಈ ಹಿಂದಿನ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ, ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ 2 ವರ್ಷದಿಂದ ಪಿಡಿಒ ಬಿಲ್ ಮಾಡಿಲ್ಲ. ಇದರಿಂದ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಮೇಟಿಗಳಿಗೆ ನೀಡುವ ಸಂಬಳವನ್ನೂ ನೀಡಿಲ್ಲ. ಈ ಕೂಡಲೇ ಆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಸೋಗಿ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡುತ್ತಿಲ್ಲ. ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಜನರನ್ನು ಅಲೆದಾಡಿಸುತ್ತಿದ್ದಾರೆ. ಇದಕ್ಕೆ ನೇರವಾಗಿ ಪಿಡಿಒ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.ಪ್ರತಿಭಟನಾ ಸ್ಥಳಕ್ಕೆ ವಿಬಿ ಜಿ ರಾಮ್ ಜಿ ಯೋಜನೆಯ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ ಭೇಟಿ ನೀಡಿ, ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು. ಮುಂದಿನ 2-3 ದಿನಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ ಎಲ್ಲ ಕಾರ್ಮಿಕರಿಗೂ ಕೆಲಸವನ್ನು ನಿರಂತರವಾಗಿ ನೀಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯಿಂದ ಕೂಲಿ ಕಾರ್ಮಿಕರು ಹಿಂದೆ ಸರಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಸಂಯೋಜಕಿ ಸೈನಾಜ್, ಹಾಲೇಶ, ಪ್ರಕಾಶ, ಕರಿಬಸಪ್ಪ, ಮಂಜಪ್ಪ, ದುರುಗೇಶ, ಶಾಂತಾ, ನಿರ್ಮಲಾ, ರಶೀದಾ, ಪುಷ್ಪಾ, ಬಸಮ್ಮ, ನೀಲಮ್ಮ, ಮಂಜುಳಾ ಸೇರಿದಂತೆ ಇತರರು ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.