ಮುಳಗುಂದ: ಗದಗ ವಿಧಾನಸಭಾ ಮತಕ್ಷೇತ್ರದಲ್ಲಿಯೇ ದೊಡ್ಡ ಪಟ್ಟಣವಾಗಿರುವ ಮುಳಗುಂದದಲ್ಲಿ ವಿದ್ಯುತ್ ಸಮಸ್ಯೆ ಈ ಭಾಗದ ಜನತೆಗೆ ಭೂತದಂತೆ ಹಲವು ದಶಕಗಳಿಂದ ಕಾಡಿತ್ತು. ಇದರಿಂದ ಇಲ್ಲಿನ ಜನತೆ ಬೇಸತ್ತು ಹೋಗಿದ್ದರು, ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್ ಗ್ರೀಡ್ ನಿರ್ಮಾಣಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಹೆಚ್ಚಿನ ಕಾಳಜಿ ವಹಿಸಿ, ಅಂದಾಜು ₹16 ಕೋಟಿ ವೆಚ್ಚದಲ್ಲಿ 110/11 ಕೆ.ವಿ ಸಾಮರ್ಥ್ಯದ ಗ್ರಿಡ್ ನಿರ್ಮಾಣಕ್ಕೆ ಮೇ 3ರಂದು ಚಾಲನೆ ನೀಡಲಿದ್ದಾರೆ.
ಪಟ್ಟಣದಲ್ಲಿ ಕೆರೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಸಚಿವರಾದ ಎಚ್.ಕೆ. ಪಾಟೀಲರು ಹೆಚ್ಚಿನ ಆದ್ಯತೆ ನೀಡಿದ್ದು, ಈ ಭಾಗದಲ್ಲಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.ಕನ್ನಡಪ್ರಭ ವರದಿ ಫಲ
ಹಲವು ದಶಕಗಳಿಂದ ಪಟ್ಟಣ ಒಳಗೊಂಡಂತೆ ಸುತ್ತಮುತ್ತಲ ಗ್ರಾಮಗಳಾದ ಚಿಂಚಲಿ ನೀಲಗುಂದ, ಕಲ್ಲೂರು, ಕಣವಿ, ಹೊಸೂರು, ಸೀತಾಲಹರಿ, ಬಸಾಪೂರ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳಿಗೆ ಅನಿಯಮಿತವಾಗಿ ವಿದ್ಯುತ್ ಕಡಿತವಾಗುತ್ತಿತ್ತು. ಈ ಬಗ್ಗೆ ಹಲವಾರು ಬಾರಿ ಕನ್ನಡಪ್ರಭ ದಿನಪತ್ರಿಕೆ ವಿಸ್ತೃತವಾದ ವರದಿ ಪ್ರಕಟಿಸಿತ್ತು.ನೀರಿನ ಸಮಸ್ಯೆಗೆ ಬ್ರೇಕ್
ಪಟ್ಟಣದಲ್ಲಿ ಅಂದಾಜು 34 ಪಪಂಗೆ ಸಂಬಂಧಿಸಿದ ನೀರು ಸರಬರಾಜು ಮಾಡುವ ಬೋರ್‌ವೆಲ್‌ಗಳಿದ್ದು ಅವುಗಳೆಲ್ಲ ವಿದ್ಯತ್ ಮೇಲೆಯೇ ಅವಲಂಬಿತವಾಗಿರುವುದರಿಂದ ಕೆಲವು ಸಂದರ್ಭಗಳಲ್ಲಿ ನೀರಿನ ಸಮಸ್ಯೆಯೂ ಬೃಹದಾಕಾರವಾಗಿ ಬಿಗಡಾಯಿಸಿತ್ತು. ವಿದ್ಯುತ್ ಕಡಿತದಿಂದ ಹಾಗೂ ವೋಲ್ಟೇಜ್ ಸಮಸ್ಯೆಯಿಂದ ಪಪಂನ ಬೋರ್‌ವೆಲ್‌ಗಳ ಮೋಟಾರು ಸುಡುತ್ತಿದ್ದವು. ಈಗ ಅವುಗಳಿಗೆಲ್ಲ ಬ್ರೇಕ್ ಬೀಳಲಿದೆ.
13 ಗ್ರಾಮಗಳಿಗೆ ಮುಕ್ತಿ:
ಗ್ರಿಡ್ ನಿರ್ಮಾಣದಿಂದ ಪಟ್ಟಣ ಸೇರಿದಂತೆ 13 ಗ್ರಾಮಗಳು ವಿದ್ಯುತ್ ಕಡಿತ ಸಮಸ್ಯೆಯಿಂದ ಮುಕ್ತವಾಗಲಿವೆ. ಸಣ್ಣಪುಟ್ಟ ಉದ್ದಿಮೆಗಳು, ರೈತರ ನೀರಾವರಿ ಹೊಲಗಳಿಗೆ, ಕಲ್ಲಿನ ಕ್ರಶರ್‌ಗಳಿಗೆ ಸಾರ್ವಜನಿಕರಿಗೆ ಇದರ ಸಂಪೂರ್ಣ ಉಪಯೋಗವಾಗಲಿದೆ.ವಿದ್ಯುತ್‌ನ ಕಡಿತದಿಂದ ಬೇಸತ್ತ ಜನರಿಗೆ ಈಗ ಕೆಪಿಟಿಸಿಎಲ್‌ನಿಂದ ಸಿಹಿ ಸುದ್ದಿ ಹೊರಬಿದ್ದಿದೆ. ಭೂಮಿ ಖರೀದಿ ಪ್ರಕ್ರಿಯೆ ಮುಗಿಸಿ ಜಮೀನಿಗೆ ತಂತಿ ಬೇಲಿ ನಿರ್ಮಾಣ ಮಾಡಿ ಈಗ ಸದ್ಯ ಭಾನುವಾರ ಮೇ 3ರಂದು ಸಂಜೆ 5ಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಂದ ಭೂಮಿಪೂಜೆ ನೆರವೇರಲಿದೆ.
ಮುಳಗುಂದದ ಜನತೆಯ ಹಲವು ದಶಕಗಳ ವಿದ್ಯುತ್ ಗ್ರೀಡ್ ನಿರ್ಮಾಣದ ಕನಸ್ಸು ಇಂದು ನನಸ್ಸಾಗುತ್ತಿದೆ. ಈ ಭಾಗದ ಶಾಸಕರು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ವಿಶೇಷವಾಗಿ ಆಸಕ್ತಿ ವಹಿಸಿ ಅಂದಾಜು 16 ಕೋಟಿ ವೆಚ್ಚದಲ್ಲಿ 110/11 ಕೆ.ವಿ ಸಾಮರ್ಥ್ಯದ ಗ್ರಿಡ್ ನಿರ್ಮಾಣಕ್ಕೆ ಮೇ 3ರಂದು ಚಾಲನೆ ನೀಡಲಿದ್ದು, ವಿದ್ಯುತ್ ಸಮಸ್ಯಗೆ ಮುಕ್ತಿ ಸಿಗಲಿದೆ ಎಂದು ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ ತಿಳಿಸಿದರು.ಮುಳಗುಂದ ಜನತ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್ ಗ್ರಿಡ್ ನಿರ್ಮಾಣಕ್ಕೆ ಮೇ 3ರಂದು ಚಾಲನೆ ನೀಡಲಿದ್ದು, ಅದರೊಂದಿಗೆ ಮುಳಗುಂದವನ್ನು ಪ್ರವಾಸಿ ತಾಣವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಬ್ಬಿಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿದೆ. ಅಂದಾಜು ₹1.50 ಕೋಟಿ ವೆಚ್ಚದಲ್ಲಿ ಪಟ್ಟಣದ ಪುರಾತನ ಜೈನ ಬಸದಿ ಅಭಿವೃದ್ದಿಗೆ ಚಾಲನೆ ನೀಡಲಾಗುವುದು. ಅಂದಾಜು ₹10 ಲಕ್ಷ ಅನುದಾನದಲ್ಲಿ ಪುರದ ಓಣಿಯ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಹಾಗೂ ಅಶ್ವಿನಿ ನಗರದಲ್ಲಿ ಅಂದಾಜು ₹20 ಲಕ್ಷ ವೆಚ್ಚದಲ್ಲಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ತಿಳಿಸಿದರು.