ನಾಗರಾಜ ಮಾರೇರ
ಹುಬ್ಬಳ್ಳಿ:ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಲೇ ತಾವೇ ಉದ್ಯಾನದಲ್ಲಿ "ಮಿಯಾವಾಕಿ " ಅರಣ್ಯ ಬೆಳೆಸುವ ಪ್ರಯೋಗ ಮಾಡಿರುವ ಮಹಾನಗರ ಪಾಲಿಕೆ ಸಿಬ್ಬಂದಿ ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಈ ಮೂಲಕ ಮಿಯಾವಾಕಿ ಅರಣ್ಯ ಬೆಳೆಸಿ ಪರಿಸರ ಸಂರಕ್ಷಿಸಿ ಎಂದು ಹೇಳುತ್ತಿದ್ದಾರೆ.
ಇಲ್ಲಿನ ನವನಗರದ ಮಹಾನಗರ ಪಾಲಿಕೆ ವಲಯ ಕಚೇರಿ-4ರ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ದೊಡ್ಡವಾಡ ಇಂಥದೊಂದು ಕಾರ್ಯ ಮಾಡಿದ್ದಾರೆ.20 ಗುಂಟೆಯಲ್ಲಿ 200 ಗಿಡ:
ಗಾಮನಗಟ್ಟಿ ಸಮೀಪದ, ವಾರ್ಡ್ 28ರಲ್ಲಿ ಬರುವ ಗಂಗೋತ್ರಿಯ ಪಾರ್ಕ್‌ನಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಸುಮಾರು 20 ಗುಂಟೆ ಜಾಗದಲ್ಲಿ ಜಗ್ಗಲಿ, ಹೊಂಗೆ, ಬೇವು ಸೇರಿದಂತೆ ಆಕ್ಸಿಜನ್ ನೀಡುವ 200ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇವುಗಳಿಗೆ ತಮ್ಮ ಮನೆಯ ಬೋರ್‌ವೆಲ್‌ನಿಂದ ನೀರು ಉಣಿಸುವ ಜತೆಗೆ ಅವುಗಳ ಪಾಲನೆ, ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ.
ಆಕ್ಸಿಜನ್ ಹೆಚ್ಚಳ, ತಾಪಮಾನ ನಿಯಂತ್ರಣ:
ಮಿಯಾವಾಕಿ ಅರಣ್ಯ ಬೆಳೆಸಲು ಇವರು ಆಕ್ಸಿಜನ್ ಹೆಚ್ಚಿಸುವ ಸಸಿಗಳಿಗೆ ಆದ್ಯತೆ ನೀಡಿದ್ದಾರೆ. ಒಂದು ಗಿಡದಿಂದ ಮತ್ತೊಂದು ಗಿಡದ ನಡುವೆ ಸುಮಾರು 10 ಅಡಿ, ಒಂದು ಸಾಲಿನಿಂದ ಮತ್ತೊಂದು ಸಾಲಿಗೆ 15 ಅಡಿ ಅಂತರದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಹೀಗಾಗಿ ಗಿಡ ನೆಟ್ಟು ಎರಡು ವರ್ಷದಲ್ಲಿಯೇ ಗಿಡಗಳು ದಷ್ಟ-ಪುಷ್ಟವಾಗಿ ಬೆಳೆದು ನಿಂತಿವೆ. ಇವುಗಳಿಗೆ ಬೇಕಾದ ಸಾವಯವ ಗೊಬ್ಬರವನ್ನು ಸ್ವಂತ ಹಣದಲ್ಲಿ ತರಿಸಿ ತಿಂಗಳಿಗೊಮ್ಮೆ ಹಾಕುತ್ತಾರೆ.ಪ್ರತಿ ಭಾನುವಾರ ಶ್ರಮದಾನ:
ಕಚೇರಿಗೆ ರಜೆ ಇರುವ ದಿನಗಳಲ್ಲಿ ಈ ಮಿಯಾವಾಕಿ ಅರಣ್ಯದಲ್ಲಿಯೇ ಕಾಲ ಕಳೆಯುವ ಇವರು ಅವುಗಳಿಗೆ ನೀರು ಹಾಯಿಸುವುದು, ಗಿಡಗಳ ಸುತ್ತ ಮಣ್ಣು ಸಡಿಲಿಕೆ ಮಾಡುತ್ತಾರೆ. ಭಾನುವಾರ ಕನಿಷ್ಠ ಎರಡರಿಂದ ಮೂರು ಗಂಟೆ ಶ್ರಮದಾನ ಮಾಡುತ್ತಾರೆ.ಪಾಲಿಕೆಯ ಸಹಕಾರ:
ಮಂಜುನಾಥ ದೊಡ್ಡವಾಡ ಅವರ ಈ ಪರಿಸರ ಕಾಳಜಿಗೆ ಪಾಲಿಕೆಯು ಸಹ ಬೆನ್ನೆಲುಬಾಗಿ ನಿಂತಿದೆ. ಉದ್ಯಾನದಲ್ಲಿ ಸಸಿ ನೆಡುವ ಚಿಂತನೆ ಇವರಲ್ಲಿ ಬಂದಾಗ ಅಧಿಕಾರಿಗಳು ಬೆನ್ನು ತಟ್ಟಿದ್ದಾರೆ. ಪಾಲಿಕೆ ವತಿಯಿಂದಲೇ ಸಸಿ ನೆಡಲಾಗಿದೆ. ತಿಂಗಳಿಗೊಮ್ಮೆ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಮಿಯಾವಾಕಿ ಅರಣ್ಯಕ್ಕೆ ಬಂದು ಗಿಡಗಂಟಿ ತೆರವುಗೊಳಿಸಿ ಹಸನು ಮಾಡುತ್ತಿದ್ದಾರೆ.ಇತರರಿಗೆ ಪ್ರೇರಣೆ:
ಗಂಗೋತ್ರಿ ಪಾರ್ಕ್‌ನಲ್ಲಿ ಮಿಯಾವಾಕಿ ಅರಣ್ಯ ಬೆಳೆಸಿರುವುದನ್ನು ನೋಡಿ ಪ್ರಜಾನಗರದ ಉದ್ಯಾನದಲ್ಲೂ 1 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಸಸಿ ನೆಟ್ಟು ಮಿಯಾವಾಕಿ ಅರಣ್ಯ ಬೆಳೆಸಲಾಗಿದೆ. ಹೀಗಾಗಿ ಗಂಗೋತ್ರಿ ಪಾರ್ಕ್‌ಗೆ ಹಲವರು ಭೇಟಿ ನೀಡಿ, ಮಿಯಾವಾಕಿ ಅರಣ್ಯ ಬೆಳೆಸುವ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ತಾಪಮಾನ ನಿಯಂತ್ರಣ...ವರ್ಷದಿಂದ ವರ್ಷಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿದೆ. ಅಷ್ಟೇ ವೇಗದಲ್ಲಿ ಅರಣ್ಯನಾಶವೂ ಆಗುತ್ತಿದ್ದು ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಪ್ರತಿ ಉದ್ಯಾನದಲ್ಲಿ ಅಲಂಕಾರಿಕ ಗಿಡ, ಹೂವು ಬಿಡುವ ಸಸಿ ನೆಡದೆ, ಮಿಯಾವಾಕಿ ಅರಣ್ಯ ಬೆಳೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಇದರಿಂದ ಬಿಸಿಲಿನ ಪ್ರಖರತೆ ಕಡಿಮೆ ಆಗುವ ಜತೆಗೆ ಹಸರೀಕರಣವೂ ಆಗುತ್ತದೆ. ಇಂತಹ ಅರಣ್ಯದಿಂದ ಮಕ್ಕಳಲ್ಲಿ ಪರಿಸ್ಪರ ಪ್ರೇಮ ಬೆಳೆಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಮಂಜುನಾಥ ದೊಡ್ಡವಾಡ.
ಉದ್ಯಾನದಲ್ಲಿ ಲ್ಯಾನ್, ಹೂವಿನ ಗಿಡದ ಬದಲು ಆಕ್ಸಿಜನ್ ಹೆಚ್ಚಿಸುವ ಗಿಡ ನೆಡಬೇಕು. ಇವುಗಳೊಂದಿಗೆ ಹಣ್ಣು ಬಿಡುವ ಗಿಡ ನೆಟ್ಟರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಪ್ರತಿ ಮನೆ ಎದುರು ಸಣ್ಣ ಪ್ರಮಾಣದ 2 ಗಿಡಗಳನ್ನು ನೆಟ್ಟರು ತಂಪಾದ ವಾತಾವರಣದ ಜತೆಗೆ ಉತ್ತಮ ಆಕ್ಸಿಜನ್ ಸಿಗುತ್ತದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಮಂಜುನಾಥ ದೊಡ್ಡವಾಡ, ಪಾಲಿಕೆ ಜ್ಯೂನಿಯರ್ ಎಂಜಿನಿಯರ್