ಲಂಚ ಬೇಡಿಕೆ ಕುಲ್ಲಂಕುಲ್ಲವಾಗಿದೆ. ಬಡ ಜನತೆ ಪಪಂ ಮೆಟ್ಟಿಲೇರಲು ಭಯಪಡುತ್ತಿದ್ದಾರೆ

ಕನಕಗಿರಿ: ಲೇಔಟ್ ಮಾಲೀಕರಿಗೆ ₹೩ ಲಕ್ಷ ಹಣದ ಬೇಡಿಕೆಯಿಟ್ಟಿರುವ ಸ್ಥಳೀಯ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿಯವರನ್ನು ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟಣದ ನಾಗರಿಕರು ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಗುರುವಾರ ಮನವಿ ಸಲ್ಲಿಸಿದರು.

ಪಪಂ ಸದಸ್ಯ ಶೇಷಪ್ಪ ಪೂಜಾರ ಮಾತನಾಡಿ, ಪಪಂನಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಮುಖ್ಯಾಧಿಕಾರಿಯೇ ಲೇಔಟ್ ಮಾಲೀಕರಿಗೆ ಹಣ ಕೇಳಿದ್ದಲ್ಲದೇ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳೋಣ ಎಂದಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜಗಜ್ಜಾಹೀರಾಗಿದೆ. ಪತ್ರಿಕೆ, ಮಾಧ್ಯಮಗಳಲ್ಲಿಯೂ ಸುದ್ದಿಗಳು ಪ್ರಕಟವಾಗಿವೆ ಆದರೂ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಅಯ್ಯನಗೌಡ ಮಾತನಾಡಿ, ಪಪಂನಲ್ಲಿನ ಲಂಚಾವತಾರಕ್ಕೆ ಪಟ್ಟಣದ ಜನತೆ ರೋಷಿ ಹೋಗಿದ್ದಾರೆ. ಲಂಚ ಬೇಡಿಕೆ ಕುಲ್ಲಂಕುಲ್ಲವಾಗಿದೆ. ಬಡ ಜನತೆ ಪಪಂ ಮೆಟ್ಟಿಲೇರಲು ಭಯಪಡುತ್ತಿದ್ದಾರೆ. ಪಪಂನಲ್ಲಿ ನಿಯಮಗಳೆಲ್ಲವೂ ಗಾಳಿಗೆ ತೂರಿ ಹಣ ಕೊಟ್ಟವರಿಗೆ ಕೆಲಸ ಮಾಡಿಕೊಡಲಾಗುತ್ತಿದೆ. ಗುಂಟೆ ಲೆಕ್ಕದ ಭೂಮಿಗೂ ಹಣ ಪಡೆದು ಫಾರಂ ೩ಯನ್ನು ಅಧಿಕಾರಿ ನೀಡಿದ್ದಾರೆ. ಶೀಘ್ರವೇ ಪಪಂ ಮುಖ್ಯಾಧಿಕಾರಿ ಅಮಾನತು ಮಾಡಿ ಕಾನೂನು ಕ್ರಮ ವಹಿಸಬೇಕು. ಅಲ್ಲದೇ ಪಂಚಾಯತಿಯ ನಾನಾ ವಿಭಾಗದ ಸಿಬ್ಬಂದಿ ಬೇರೆಡೆಗೆ ವರ್ಗಾಯಿಸಿ ಹೊಸ ಸಿಬ್ಬಂದಿ ನಿಯೋಜಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ವೇಳೆ ಹನುಮೇಶ ಗಂಗಾಮತ, ಸುರೇಶ ಕುರುಗೋಡು, ಹನುಮಂತರೆಡ್ಡಿ ಮಹಲಿನಮನಿ, ಬಸವರಾಜ, ವೀರೇಶ ಛಲವಾದಿ, ಯಮನೂರಪ್ಪ, ರಾಮಾಂಜನೇಯ, ಬಸವರಾಜ ನಾಯಕ, ಆಂಜನೇಯ ಭಜಂತ್ರಿ, ಕಿರಣ ಕುರುಬರ, ವೆಂಕಟೇಶ ಇತರರಿದ್ದರು.