ಮಂಗಳೂರು: ಸಾರ್ವಜನಿಕ ಶಾಂತಿ ಹಾಗೂ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಸಲಾಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಜ.5ರಂದು ಸಂಜೆ 6 ಗಂಟೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಮಂಗಳೂರು: ಸಾರ್ವಜನಿಕ ಶಾಂತಿ ಹಾಗೂ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಸಲಾಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಜ.5ರಂದು ಸಂಜೆ 6 ಗಂಟೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲು ತೀರ್ಮಾನಿಸಲಾಗಿದೆ.ಇತ್ತೀಚೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “ಕಲಿಯುಗ ಕಲ್ಕಿ” ಎಂಬ ಖಾತೆಯಲ್ಲಿ ದುರುದ್ದೇಶಪೂರಿತ ಹಾಗೂ ಪ್ರಚೋದನಾತ್ಮಕ ಪೋಸ್ಟ್ ಸಾರ್ವಜನಿಕರ ಗಮನ ಸೆಳೆದಿದೆ. ಈ ಪೋಸ್ಟ್‌ನಲ್ಲಿರುವ ವಿಷಯವು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂಥದ್ದಾಗಿದ್ದು, ಸಮಾಜದಲ್ಲಿ ಅಶಾಂತಿ, ವೈಮನಸ್ಸು ಹಾಗೂ ಶಾಂತಿ ಭಂಗಕ್ಕೆ ಕಾರಣವಾಗುವ ಅಪಾಯವನ್ನು ಹೊಂದಿದೆ. ಇದು ಸಮಾಜದ ಸಾಮರಸ್ಯ ಮತ್ತು ಸಹಬಾಳ್ವೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.ಅಪಪ್ರಚಾರ ಮಾಡುವವರಿಗೆ ಬುದ್ಧಿ ನೀಡುವಂತೆ ಹಾಗೂ ಸಮಾಜದಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆ ನೆಲೆಗೊಳ್ಳುವ ಉದ್ದೇಶದಿಂದ ಜ.5ರಂದು ಸಂಜೆ 6 ಗಂಟೆಗೆ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುವುದು. ಈ ಅಪಪ್ರಚಾರಕ್ಕೆ ಕಾರಣರಾದವರು ಅಥವಾ ಇದರಲ್ಲಿ ಭಾಗಿಯಾದವರು, ಆತ್ಮಾವಲೋಕನದ ಮನಸ್ಸಿನಿಂದ ಆ ಸಮಯದಲ್ಲಿ ಗರೋಡಿ ಕ್ಷೇತ್ರಕ್ಕೆ ಆಗಮಿಸಿ, ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಜಾತ್ರೋತ್ಸವ ಪ್ರಯುಕ್ತ ನಡೆಯುವ ಕೋಳಿ ಅಂಕದ ಕುರಿತು ಆಡಳಿತ ಯಂತ್ರವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕೋಳಿ ಅಂಕವನ್ನು ತಡೆಯುವಂತೆ ಯಾವುದೇ ಒತ್ತಡ ಪ್ರಯೋಗಿಸಿಲ್ಲ ಎಂದು ಪದ್ಮರಾಜ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.