ಕನ್ನಡಪ್ರಭ ವಾರ್ತೆ ಅಥಣಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ಅಥಣಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಸಾಧಕ ವಿದ್ಯಾರ್ಥಿಗಳಿಗೆ ಶಾಸಕ ಲಕ್ಷ್ಮಣ ಸವದಿ ಶುಕ್ರವಾರ ತಮ್ಮ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಐಗಳಿ ಆದರ್ಶ ಶಿಕ್ಷಣ ಸಂಸ್ಥೆಯ ದಶರಥ ಶಿವಾಜಿ ಭೋಸಲೆ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಇಬ್ಬರು ಮಕ್ಕಳು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅಥಣಿ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭೆಗಳು ಇಂದು ರಾಜ್ಯವೇ ನಮ್ಮತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ್ದಾರೆ. ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ನಡುವೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ, ದಶರಥ ಸಾಧನೆ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪೋಷಕರ ಪ್ರೋತ್ಸಾಹ ಮತ್ತು ಶಿಕ್ಷಕರ ಮಾರ್ಗದರ್ಶನಕ್ಕೆ ಈ ಸಾಧನೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಖೋತ, ಸಂಪನ್ಮೂಲ ಅಧಿಕಾರಿ ಎ.ವೈ.ಹೈಬತ್ತಿ, ಪುರಸಭಾ ಸದಸ್ಯ ರಾಜಶೇಖರ ಗುಡ್ಡೋಡಗಿ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.