ಕನ್ನಡಪ್ರಭ ವಾರ್ತೆ ಇಳಕಲ್ಲ

ನಿರಂತರ ಒಂದು ತಿಂಗಳಾದರೂ ಕುಡಿಯುವ ನೀರು ಪೂರೈಕೆ ಮಾಡಲು ವಿಫಲವಾದ ನಗರಸಭೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡ ಇಳಕಲ್ಲ ನಗರದ ಕಿಲ್ಲಾ ಒಣಿಯ ಮಹಿಳೆಯರು, ಹಿರಿಯರು ಶನಿವಾರ ನಗರದ ಕಂಠಿ ವೃತ್ತದಲ್ಲಿ ಖಾಲಿ ಕೊಡಗಳೊಂದಿಗೆ ಕಂಠಿ ವೃತ್ತದಲ್ಲಿ ರಸ್ತೆ ಬಂದ್‌ ಮಾಡಿ ಪ್ರತಿಭಟಿಸಿದರು. ಒಂದು ತಿಂಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಯಾರೂ ಸಮಸ್ಯೆ ಕೇಳುತ್ತಿಲ್ಲ. ಮತ ಕೇಳುವಾಗ ಬಿಸಲೆನ್ನದೆ ಮನೆ ಮನೆಗೆ ಬಂದು ಮತ ಕೊಡಿ ಎಂದು ಕೇಳುತ್ತಾರೆ. ಆದರೆ ನಮಗೆ ಕಷ್ಟ ಬಂದಾಗ ಕುಡಿಯಲು ನೀರು ಕೊಡದೆ ಸತಾಯಿಸುತ್ತಿದ್ದಾರೆ. ಶಾಸಕರು ತಕ್ಷಣ ಕುಡಿಯುವ ನೀರನ್ನು ಸರಿಯಾಗಿ ಪೂರೈಕೆ ಮಾಡಿಬೇಕು ಎಂದು ಒತ್ತಾಯಿಸಿದರು.

ಆಲಮಟ್ಟಿ ಡ್ಯಾಂನಲ್ಲಿ ನೀರು ಪೂರೈಕೆ ಮಾಡುವ ಮೂರು ಮಷೀನ್ ದುರಸ್ತಿಲ್ಲಿದೆ ಎಂದು ಹೇಳುತ್ತಿದ್ದಾರೆ. ಮಷೀನ್‌ ರಿಪೇರಿ ಮಾಡಿಸಲಾಗದಿದ್ದರೆ ಹೊಸ ಮಷೀನ್ ತಂದು ಕೂಡ್ರಿಸಿ ನೀರು ಪೂರೈಕೆ ಮಾಡಿ, ನಿಮಗೆ ಆಗದಿದ್ದರೆ ನಮಗಾದರೂ ಹೇಳಿ ಸಾರ್ವಜನಿಕರಲ್ಲಿ ಬಿಕ್ಷೆ ಬೇಡಿಯಾದರೂ ಹಣ ಕೂಡಿಸಿ ಹೊಸ ಮಷೀನ್‌ ಕೊಡಿಸುತ್ತೇವೆ ಎಂದು ಬಸನಗೌಡರ ಸರಕಾರಕ್ಕೆ ಮನವಿ ಮಾಡಿದರು.

ಪ್ರತಿಭಟನೆ ಮಾಡಿದರೂ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಬಾರದಿರುವುದು ನಿರ್ಲಕ್ಷ್ಯ ಪರಮಾವಧಿ. ಜನಪ್ರತಿನಿಧಿಗಳು ಮತ್ತು ನಗರಸಭೆ ಅಧಿಕಾರಿಗಳು ತಕ್ಷಣ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಿಲ್ಲಾ ಒಣಿಯ ಮಹಿಳೆಯರು ಮತ್ತು ಕಿಲ್ಲಾ ಒಣಿಯ ಹಿರಿಯರು, ಇತರರು ಉಪಸ್ಥಿತರಿದ್ದರು.