ಕನ್ನಡಪ್ರಭ ವಾರ್ತೆ ಪಾಂಡವಪುರ
ಪುರಸಭೆ ವ್ಯಾಪ್ತಿ ಹಾರೋಹಳ್ಳಿ ಬಳಿ ಗುರುತಿಸಲಾಗಿರುವ ೧೭೮ ಸೈಟ್‌ಗಳ ಹಂಚಿಕೆ ಮಾಡುವುದಕ್ಕೆ ನಿವೇಶನ ರಹಿತ ಅರ್ಹ ವ್ಯಕ್ತಿಗಳಿಂದ ಅರ್ಜಿ ಸ್ವೀಕರಿಸಿ, ಹಲವು ಮಾನದಂಡ ರೂಪಿಸಿ ಸೈಟ್ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಆಡಳಿತಾಧಿಕಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಅವರು ಸೈಟು ಹಂಚಿಕೆ ಮಾಡುವ ಕುರಿತು ಶಾಸಕರಲ್ಲಿ ಅನುಮತಿ ಕೋರಿದರು. ಆ ವೇಳೆ ಶಾಸಕರು ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಇಲ್ಲದ ಬಡವರಿಗೆ ಸೈಟ್ ಹಂಚಿಕೆ ಮಾಡಲು ಮಾನದಂಡ ರಚಿಸಿ ಅದರ ಅನುಸಾರವಾಗಿ ಅರ್ಜಿ ಸ್ವೀಕರಿಸಿ ಎಂದು ಸೂಚನೆ ನೀಡಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಕೆಲವಡೆ ರಸ್ತೆ ನಿರ್ಮಾಣಕ್ಕಾಗಿ ಮೂವರು ತಮ್ಮ ನಿವೇಶನಗಳನ್ನು ಬಿಟ್ಟುಕೊಟ್ಟಿದ್ದಾರೆ. ಹಾರೋಹಳ್ಳಿ ಬಳಿ ಹಂಚಿಕೆ ಮಾಡಲಾಗುತ್ತಿರುವ ೧೭೮ ನಿವೇಶನಗಳ ಪೈಕಿ ಮೂವರಿಗೆ ಒಂದೊಂದು ನಿವೇಶನ ಕಾಯ್ದಿರಿಸಿ ಉಳಿಕೆ ೧೭೫ ಸೈಟ್‌ಗಳನ್ನು ಹಂಚಿಕೆ ಮಾಡಬೇಕು, ನಿವೇಶನ ಹಂಚಿಕೆ ಮಾಡುವ ಮುನ್ನ ಅಲ್ಲಿಗೆ ಬೇಕಿರುವ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ನಂತರ ನಿವೇಶನ ಹಂಚಿಕೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.ಪುರಸಭೆ ಸದಸ್ಯ ವಕೀಲ ಮುರುಳೀಧರ್ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಾಗಗಳನ್ನು ಉಳ್ಳವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹಾಗಾಗಿ ಶಾಸಕರು ನಮ್ಮ ವ್ಯಾಪ್ತಿಯಲ್ಲಿ ಇರುವ ಸರ್ಕಾರ ಹಾಗೂ ಪುರಸಭೆ ಆಸ್ತಿಯನ್ನು ಗುರುತಿಸಿ ಅಲ್ಲಿ ಮತ್ತಷ್ಟು ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಬೇಕು. ಪಟ್ಟಣದ ರೋಟರಿ ಪಕ್ಕದಲ್ಲಿ ಇರುವ ಸರ್ಕಾರಿ ಜಾಗವನ್ನು ಕಲಾಮಂದಿರ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಜೊತೆಗೆ ಪುರಸಭೆ ಆಸ್ತಿ ಎಲ್ಲಿವೆ?, ಕೋರ್ಟ್‌ನಲ್ಲಿ ಎಷ್ಟು ಪ್ರಕರಣಗಳಿವೆ ಎನ್ನುವ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಸಿದ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ರೋಟರಿ ಶಾಲೆಯ ಪಕ್ಕದಲ್ಲಿ ಇರುವ ಸರ್ಕಾರದ ಖಾಲಿ ಜಾಗವನ್ನು ಈಗಾಗಲೇ ಸರ್ವೇ ಇಲಾಖೆಗೆ ಮೀಸಲಿಟ್ಟಿದೆ. ಕಲಾಮಂದಿರ ನಿರ್ಮಾಣಕ್ಕೆ ಬೇರೆ ಕಡೆ ೫ ಎಕರೆ ಜಮೀನು ಗುರುತಿಸಲಾಗಿದೆ. ಜೊತೆಗೆ ೧೫ ಎಕರೆಯಲ್ಲಿ ಕ್ರೀಡಾಂಗಣ ನಿರ್ಮಿಸಿಲು ಚಂದ್ರೆ ಬಡಾವಣೆಯ ಬಳಿ ಸರ್ಕಾರಿ ಜಾಗ ಗುರುತಿಸಲಾಗಿದೆ. ಗ್ರಂಥಾಲಯ ನಿರ್ಮಾಣಕ್ಕೆ ೧ ಎಕರೆ ಜಾಗ ಗುರುತಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ, ಕೋರ್ಟ್‌ನಲ್ಲಿರುವ ಪ್ರಕರಣಗಳು, ಹೈಕೋಟ್‌ನಲ್ಲಿ ಪುರಸಭೆ ಪರವಾಗಿ ಆದೇಶ ಬಂದಿರುವ ಪ್ರಕರಣಗಳ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು. ಜೊತೆಗೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಳ್ಳದ ರಸ್ತೆಗಳ ಪಟ್ಟಿಮಾಡಿ ಅದರ ಅಂದಾಜುಪಟ್ಟಿ ನನಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆಯ ಮುಂಭಾಗದ ಸಂತೆ ಮೈದಾನದಲ್ಲಿ ಅಂದಾಜು ೭೦ ಕೋಟಿ ರು. ವೆಚ್ಚದಲ್ಲಿ ೭೨ ಅಂಗಡಿ ಮಳಿಗೆ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಸರ್ಕಾರದಿಂದ ಅಷ್ಟು ಅನುದಾನ ಸಿಗುವುದು ಕಷ್ಟವಾಗಿರುವುದರಿಂದ ಕೆಯುಐಡಿಎಫ್‌ಸಿ ವತಿಯಿಂದ ಶೇ.೭೦ರಷ್ಟು ಸಾಲಪಡೆದು ಉಳಿದ ಹಣವನ್ನು ಪುರಸಭೆಯಿಂದ ಬಳಕೆ ಮಾಡಿಕೊಳ್ಳಬಹುದು, ಸಾಲಪಡೆದ ಹಣದ ಪಾವತಿ ಮಾಡುವ ಬಗ್ಗೆ ಪುರಸಭೆಯಿಂದ ಕೆಯುಐಡಿಎಫ್‌ಸಿಗೆ ಮಾಹಿತಿ ಸಲ್ಲಿಸಬೇಕು. ಇನ್ನೂ ಹತ್ತನೇ ಹಣಕಾಸಿನಲ್ಲಿ ನಿರ್ಮಿಸಿರುವ ೨೬ ಮಳಿಗೆ ಹರಾಜು ಮಾಡುವ ಪ್ರಕ್ರಿಯೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು.
ಕಾವೇರಿ ಪಕ್ಕದಲ್ಲಿಯೇ ಇದ್ದರೂ ಪಟ್ಟಣದ ಕೆಲವು ಬಡಾವಣೆಗೆ ಕುಡಿಯುಲು ಕಾವೇರಿ ನೀರು ಇಲ್ಲ, ಹಾಗಾಗಿ ಕಾವೇರಿಯಿಂದ ಹೆಚ್ಚುವರಿ ಪೈಪ್‌ಲೈನ್ ಅಳವಡಿಕೆ ಮಾಡಿ ಕುಡಿಯಲು ಕಾವೇರಿ ನೀರು ಪೂರೈಕೆ ಮಾಡಲು ಕ್ರಮವಹಿಸಬೇಕು, ಜತೆಗೆ ಪುರಸಭೆಯಲ್ಲಿ ಸರಿಯಾಗಿ ಸಾರ್ವಜನಿಕರ ಕೆಲಸಕಾರ್ಯಗಳು ನಡೆಯುತ್ತಿಲ್ಲ, ಒಬ್ಬರೇ ಎರಡು ಮೂರು ಜವಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ಕ್ರಮವಹಿಸಬೇಕೆಂದು ಸದಸ್ಯ ಮುರುಳೀಧರ್ ಶಾಸಕರಲ್ಲಿ ಮನವಿ ಮಾಡಿದರು.ಸಭೆಯಲ್ಲಿ ಮುಖ್ಯಾಧಿಕಾರಿ ಸತೀಶ್ ಸೇರಿದಂತೆ ಸರ್ಕಾರದ ನಾಮನಿರ್ದೇಶನ ಸದಸ್ಯರು ಹಾಜರಿದ್ದರು.