- ಬುಡಕಟ್ಟು ವಿವಿ ಸ್ಥಾಪನೆ ಬಗ್ಗೆ ಸರ್ಕಾರ ಪರಿಶೀಲನೆ, ಇನ್ನು 2 ದಿನಗಳಲ್ಲೇ ಬಜೆಟ್ ದಿನಾಂಕ ಘೋಷಣೆ
- - - - ಭಾರತ- ಅಮೇರಿಕಾ ಮಧ್ಯೆ ಆಗಿರುವ ವಾಣಿಜ್ಯ ಒಪ್ಪಂದದಿಂದ ನಮ್ಮ ದೇಶದ ರೈತರಿಗೆ ಅನ್ಯಾಯ- ವಾಲ್ಮೀಕಿ ನಾಯಕ ಸಮುದಾಯದವರನ್ನು ಮತ್ತೆ ಸಚಿವರಾಗಿ ಮಾಡುತ್ತೇವೆ ಎಂದ ಸಿದ್ದರಾಮಯ್ಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮೆಟ್ರೋ ದರ ಹೆಚ್ಚಳವನ್ನು ಕೇಂದ್ರ ಸರ್ಕಾರದಿಂದ ನೇಮಕವಾದ ಮೆಟ್ರೋ ಅಧ್ಯಕ್ಷರು ನಿಗದಿಪಡಿಸುತ್ತಾರೆಯೇ ಹೊರತು, ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆಗೆ ಸೋಮವಾರ ಆಗಮಿಸಿದ್ದ ವೇಳೆ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾವಂತೂ ಮೆಟ್ರೋ ದರ ಹೆಚ್ಚಿಸಲು ಹೇಳಿರಲಿಲ್ಲ. ಮೆಟ್ರೋ ದರದ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ ದೆಹಲಿಗೆ ತೆರಳುತ್ತಿದ್ದರೆ ಅವರನ್ನೇ ನೀವು ಕೇಳಬೇಕು ಎಂದರು.
ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸುತ್ತೇವೆ. ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ ಸರ್ಕಾರವೂ ಸೂಕ್ತ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಬಜೆಟ್ ಸಿದ್ಧತೆಗಳು ನಡೆದಿವೆ. ನಾಳೆ ಅಥವಾ ನಾಡಿದ್ದು ಬಜೆಟ್ ಮಂಡನೆ ಯಾವಾಗ ಎಂಬ ದಿನಾಂಕವನ್ನೂ ಘೋಷಣೆ ಮಾಡಲಿದ್ದೇನೆ ಎಂದು ಸಿಎಂ ತಿಳಿಸಿದರು.ಭಾರತ- ಅಮೇರಿಕಾ ಮಧ್ಯೆ ಆಗಿರುವ ವಾಣಿಜ್ಯ ಒಪ್ಪಂದದಿಂದ ನಮ್ಮ ದೇಶದ ರೈತರಿಗೆ ಅನ್ಯಾಯವಾಗುತ್ತದೆ. ರೈತರಿಗೆ ಆಗುವ ಅನ್ಯಾಯದ ಬಗ್ಗೆಯೇ ನಾನೂ ಟ್ವೀಟ್ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕಾದ ಒತ್ತಡಕ್ಕೆ ಮಣಿದಿದ್ದಾರೆ. ಈ ಒಪ್ಪಂದದಿಂದ ರೈತರಿಗೆ ಅನ್ಯಾಯ ಆಗುವುದಂತೂ ಸ್ಪಷ್ಟ ಎಂದು ಹೇಳಿದರು.
ವಾಲ್ಮೀಕಿ ಸಮುದಾಯದ ಯಾರನ್ನಾದರೂ ನಾವು ಸಂಪುಟದಿಂದ ತೆಗೆದು ಹಾಕಿದ್ದೀವಾ? ಕಾರಣಾಂತರದಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿತ್ತು. ವಾಲ್ಮೀಕಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಇಲ್ಲಿ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆಯ ವೇಳೆ ವಾಲ್ಮೀಕಿ ನಾಯಕ ಸಮುದಾಯದವರನ್ನು ಮತ್ತೆ ಸಚಿವರಾಗಿ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಕುರಿತ ಪ್ರಶ್ನೆಗೆ ಕೆರಳಿ ಕೆಂಡಾಮಂಡಲರಾದ ಸಿಎಂ ಸಿದ್ದರಾಮಯ್ಯ ಮತ್ತೆ ಸಾವರಿಸಿಕೊಂಡು, ಏ ಅದನ್ನೇ ಪುನಾ ಎಲ್ಲಾ ಕಡೆ ಕೇಳಿ ನೀವು. ಎಲ್ಲಿಗೆ ಹೋದರೂ, ಮತ್ತೆ ಅಲ್ಲಿಗೆ ಬನ್ನಿ ನೀವು. ಅವರನ್ನೇ ಕೇಳಿ. ನಿನ್ನ ಎದುರಿಗೆ ಸಿಎಂ ಕುರ್ಚಿ ವಿಚಾರದ ಮಾತುಕತೆ ಆಗಿತ್ತಾ ಅಪ್ಪಾ ಅಂತಾ. ಎಲ್ಲಾ ಸುತ್ತಿ ಬಳಸಿ, ನೀವು ಅಲ್ಲಿಗೆ ಬರುತ್ತೀರಿ. ಅವ್ರು ಹೇಳುತ್ತಾರೆ ಅಲ್ವಾ? ಅವರನ್ನೇ ಕೇಳಪ್ಪಾ ತಮ್ಮಾ... ಬೇರೆ ವಿಚಾರವಿದ್ದರೆ ಕೇಳಿ ಎಂದು ಪ್ರಶ್ನಿಸಿದ ಮಾಧ್ಯಮದವರಿಗೆ ಸಲಹೆ ನೀಡುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೆಲಿಕಾಫ್ಟರ್‌ನತ್ತ ಹೊರಟು ನಿಂತರು.
ಈ ಸಂದರ್ಭ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಇತರರು ಇದ್ದರು.- - -
(ಕೋಟ್) * ಎಸ್ಸೆಸ್ಸೆಂ ರಾಜೀನಾಮೆ ಸತ್ಯಕ್ಕೆ ದೂರವಾದ ಸಂಗತಿಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆ ತಮಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಎಸ್.ಎಸ್. ಮಲ್ಲಿಕಾರ್ಜುನ ರಾಜೀನಾಮೆ ಕೊಟ್ಟಿಲ್ಲ. ನನ್ನ ಬಳಿ ಮಲ್ಲಿಕಾರ್ಜುನ ಬಂದೇ ಇಲ್ಲ. ರಾಜೀನಾಮೆ ಅನ್ನೋದೆಲ್ಲಾ ಸತ್ಯಕ್ಕೆ ದೂರವಾದ ಸಂಗತಿ ಅಷ್ಟೇ. - ಸಿದ್ದರಾಮಯ್ಯ, ಮುಖ್ಯಮಂತ್ರಿ.
- - --9ಕೆಡಿವಿಜಿ7, 8.ಜೆಪಿಜಿ:
ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.