ಗೌರಿ ಆಗಮನಕ್ಕೆ ಮಲೆನಾಡಿನಲ್ಲಿ ಭರದ ಸಿದ್ಧತೆ

| Published : Aug 26 2025, 01:03 AM IST

ಗೌರಿ ಆಗಮನಕ್ಕೆ ಮಲೆನಾಡಿನಲ್ಲಿ ಭರದ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿ, ಗಣೇಶ ಹಬ್ಬಕ್ಕೆ ನಗರದೆಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದೆ. ಗಣೇಶನ ಆಗಮನಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ತಯಾರಿ ನಡೆಸಿದ್ದಾರೆ.

ಶಿವಮೊಗ್ಗ: ಗೌರಿ, ಗಣೇಶ ಹಬ್ಬಕ್ಕೆ ನಗರದೆಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದೆ. ಗಣೇಶನ ಆಗಮನಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ತಯಾರಿ ನಡೆಸಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಎಂದಿಗಿಂತ ಹೆಚ್ಚಾಗಿತ್ತು. ಜನ ಹಬ್ಬಕ್ಕೆ ಬೇಕಾದ ಸಾಮಾಗ್ರಿಯನ್ನು ಕೊಂಡುಕೊಳ್ಳಲು ಮಾರುಕಟ್ಟೆಯತ್ತ ಮುಖ ಮಾಡಿದ್ದರು.ಶಿವಮೊಗ್ಗ ನಗರದ ಪ್ರಮುಖ ವ್ಯಾಪಾರ ಸ್ಥಳಗಳಾದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಬಿ.ಎಚ್.ರಸ್ತೆಯಲ್ಲಿ ಜನಸಂಚಾರ ಅಧಿಕವಾಗಿತ್ತು. ಹೂ, ಹಣ್ಣು ಮತ್ತು ಪೂಜಾ ಸಾಮಾಗ್ರಿಗಳನ್ನು ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ದಿನಸಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಂಡುಬಂದಿತು.ಪ್ರತಿ ಬಡಾವಣೆಗಳಲ್ಲೂ ಗಣಪತಿ ಕೂರಿಸಲು ತಯಾರಿ ನಡೆಯುತಿತ್ತು. ಮನೆಗಳಲ್ಲೂ ಗಣೇಶ ಮತ್ತು ಗೌರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಟಪ ನಿರ್ಮಿಸಲಾಗಿದೆ. ಜೊತೆಗೆ ಚಕ್ಕಲಿ, ಕೋಡುಬಳೆ, ಕಡುಬು, ಉಂಡೆಗಳು, ಸಿಹಿ ತಿನಿಸುಗಳ ತಯಾರಿ ಕೂಡ ಭರ್ಜರಿಯಾಗಿಯೇ ನಡೆದಿದೆ.ಈ ಬಾರಿ ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹಣ್ಣು, ಹೂಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ದೂರದ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಊರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ರೈಲು, ಬಸ್ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಿದೆ.ಪೂಜೆಗೆ ಅಗತ್ಯವಾದ ಹೂವು, ಹಣ್ಣು, ಬಾಳೆ ದಿಂಡು, ಮಾವಿನ ತೋರಣ, ತೆಂಗಿನ ಕಾಯಿ ಹಾಗೂ ಇನ್ನಿತರ ವಸ್ತುಗಳನ್ನು ಗಾಂಧಿ ಬಜಾರ್, ಹೂವಿನ ಮಾರುಕಟ್ಟೆಯಲ್ಲಿ ಖರೀದಿಸಲು ಗ್ರಾಹಕರು ಮುಗಿಬಿದ್ದರು. ಹೀಗಾಗಿ ಗಾಂಧಿ ಬಜಾರ್ ಭಾಗದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿತು.ನಗರದ ಕೆಲವು ಕಡೆ ರಸ್ತೆ ಬದಿಗಳಲ್ಲಿ ಹೂವು, ಬಾಳೆ ದಿಂಡು, ಮಾವಿನ ಸೊಪ್ಪಿನ ರಾಶಿ ರಾಶಿ ಗ್ರಾಹಕರನ್ನು ಸೆಳೆದವು. ಹಬ್ಬದ ಅಂಗವಾಗಿ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದವು.ಮಾರುಕಟ್ಟೆಯಲ್ಲಿ ಕೆ.ಜಿ ಸೇಬಿಗೆ 150 ರಿಂದ 200 ರು., ಕೆ.ಜಿ ದಾಳಿಂಬೆಗೆ 200 ರು., ಕೆ.ಜಿ ದ್ರಾಕ್ಷಿ ಬೆಲೆ 100 ರು., ಕೆ.ಜಿ ಮೋಸಂಬಿಗೆ 40-60 ರು., ಕೆ.ಜಿ ಕಿತ್ತಳೆಗೆ 60 ರು., ಬಾಳೆ ಹಣ್ಣಿಗೆ 80 ರು. ದರ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ಎಲ್ಲ ಹಣ್ಣುಗಳನ್ನು ಕೂಡಿಸಿ ಪ್ಯಾಕೇಜ್ ರೂಪದಲ್ಲಿ ಪೂಜೆಗಾಗಿ ಸಿದ್ಧಪಡಿಸಿದ್ದ ಬುಟ್ಟಿಗೆ 150 ರು. ದರ ನಿಗದಿ ಮಾಡಿದ್ದರು.ಎರಡು ಬಾಳೆ ದಿಂಡಿಗೆ 20-30 ರು. ಒಂದು ತೆಂಗಿನ ಕಾಯಿ ಬೆಲೆ 50ರಿಂದ 60 ರು. ಇತ್ತು. ಒಂದು ಕೆಜಿ ತೆಂಗಿನಕಾಯಿ ದರ ಕೂಡ 100 ರು. ಇದೆ. ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಗ್ರಾಹಕರನ್ನು ಕಂಗಾಲು ಮಾಡಿತು.ಮಾರುಕಟ್ಟೆಯಲ್ಲಿ ಗೌರಿ, ಗಣೇಶ ಹಬ್ಬ ಹೊಸ ಹುರುಪು ಮೂಡಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಗಾಂಧಿ ಬಜಾರ್ ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು.ಗೌರಿ ಮತ್ತು ಗಣಪತಿ ಮೂರ್ತಿ ಖರೀದಿಗೆ ತಾಲೂಕು ಕೇಂದ್ರಗಳಿಂದಲೂ ಜನರು ಸೈನ್ಸ್ ಫೀಲ್ಡ್‌ಗೆ ಆಗಮಿಸಿದ್ದರು. ಅಲಂಕಾರ, ಖಾದ್ಯ ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲಾಯಿತು.