ಸಾರಾಂಶ
ಶಿವಮೊಗ್ಗ: ಧರ್ಮಸ್ಥಳ ಪ್ರಕರಣವನ್ನು ಯಾವುದೇ ಕಾರಣಕ್ಕೂ ಮುಚ್ಚಿ ಹಾಕಬಾರದು. ರಾಜ್ಯ ಸರ್ಕಾರ ಕೂಡಲೇ ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ(ಎನ್‌ಐಎ)ಕ್ಕೆ ವಹಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಅನುಮಾನಗಳು, ಗೊಂದಲಗಳು ಈಗ ಕೊನೆಗೊಂಡಿವೆ. ಇದರ ಹಿಂದೆ ಷಡ್ಯಂತ್ರ ಇದ್ದದ್ದು, ಈಗ ಬಯಲಾಗಿದೆ. ಬುರುಡೆಗಳ ಮುಖವಾಡಗಳೆಲ್ಲಾ ಕಳಚಿಬಿದ್ದಿವೆ ಎಂದರು. ಪಾತ್ರಧಾರಿಗಳೆಲ್ಲಾ ಈಗ ಪತ್ತೆಯಾಗಿದ್ದಾರೆ. ಈಗ ಸೂತ್ರಧಾರಗಳನ್ನು ಪತ್ತೆಹಚ್ಚಬೇಕಾಗಿದೆ. ಧರ್ಮಸ್ಥಳಕ್ಕೆ ಹಿಂದೂ ಧರ್ಮಕ್ಕೆ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಕೆಟ್ಟ ಹೆಸರು ತರಬೇಕೆಂಬ ಕೊಳಕು ನಿರ್ಧಾರಗಳೆಲ್ಲಾ ಕಳಚಿಬಿದ್ದಿವೆ. ಎಸ್‌ಐಟಿ ತನಿಖಾ ದಳ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ ಇದೊಂದು ರಾಷ್ಟ್ರಮಟ್ಟದ ಸುದ್ದಿಯಾಗಿದ್ದರಿಂದ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೆಲವು ಸಂಘಟನೆಗಳ ಪಿತೂರಿಯೂ ಇರುವ ಶಂಕೆ ಇರುವುದರಿಂದ ಇದನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.ಬುರುಡೆ ಗ್ಯಾಂಗಿನ ಮುಖ್ಯಸ್ಥ ಚಿನ್ನಯ್ಯ, ಸೂತ್ರಧಾರಿಗಳು ಎನ್ನಬಹುದಾದ ಗಿರೀಶ್ ಮಟ್ಟಣ್‌ನವರ್, ಜಯಂತ್ ಯೂಟ್ಯೂಬರ್ ಎಂ.ಡಿ.ಸಮೀರ್, ತಿಮ್ಮಾರೋಡಿ ಸೇರಿದಂತೆ ಅನೇಕರು ಇದರ ಹಿಂದಿದ್ದಾರೆ. ಈಗಾಗಲೇ ಇವರೆಲ್ಲರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಆದರೆ ಇಷ್ಟೇ ಸಾಲದು ಇವರು ಪಾತ್ರಧಾರಿಗಳು ಇದರ ಹಿಂದೆ ಸೂತ್ರಧಾರಿಗಳಿದ್ದಾರೆ ಅವರನ್ನೂ ಪತ್ತೆ ಹಚ್ಚಬೇಕಾಗಿದೆ. ಇವರೆಲ್ಲರನ್ನೂ ಮೌಖಿಕವಾಗಿಯೇ ಬಂಧಿಸಲಾಗಿದೆ. ಆದರೆ, ಅಧಿಕೃತವಾಗಿ ಬಂಧಿಸಿ ಅವರಿಗೆ ಒದ್ದು ಸತ್ಯವನ್ನು ಬಾಯಿಬಿಡಿಸಬೇಕು ಎಂದು ಒತ್ತಾಯಿಸಿದರು.ಕೆಲವು ರಾಷ್ಟ್ರದ್ರೋಹಿಗಳ ಸಂಘಟನೆಗಳು ಈ ಷಡ್ಯಂತ್ರದ ಹಿಂದೆ ಇವೆ. ಎಸ್‌ಡಿಪಿಐಗೂ ಧರ್ಮಸ್ಥಳಕ್ಕೂ ಏನು ಸಂಬಂಧ ಶ್ರೀಕ್ಷೇತ್ರವನ್ನು ಅಪವಿತ್ರಗೊಳಿಸುವ ಹುನ್ನಾರವಿದು. ಇವರಿಗೆಲ್ಲಾ ಹಣ ಎಲ್ಲಿಂದ ಬಂತು ಕಾಂಗ್ರೆಸ್ ಪಕ್ಷದವರೇ ರಾಷ್ಟ್ರೀಯ ತನಿಖಾದಳದಿಂದ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಸಂಪೂರ್ಣ ನ್ಯಾಯ ಸಿಗಬೇಕು ಎಂದರೆ ಎನ್‌ಐಎಗೆ ವರ್ಗಾಯಿಸಬೇಕಾಗುತ್ತದೆ. ಎಸ್‌ಐಟಿ ಕೊನೇಪಕ್ಷದ ಮಧ್ಯಂತರ ವರದಿಯನ್ನೂ ಕೂಡ ನೀಡಿಲ್ಲ. ಈ ಎಲ್ಲಾ ಸುಳ್ಳು ಆರೋಪಿಗಳನ್ನು ಮಂಪರು ಪರೀಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರೀ, ಈ.ವಿಶ್ವಾಸ್, ಬಾಲು, ಜಾಧವ್, ಕಾಚೀನಕಟ್ಟೆ ಸತ್ಯನಾರಾಯಣ, ಲೋಕೇಶ್, ವಾಗೀಶ್, ಕುಬೇರ, ಮೋಹನ್, ಶಿವಾಜಿ ಸೇರಿದಂತೆ ಹಲವರು ಇದ್ದರು.ಕಮಿಷನ್ ದಂಧೆ ಒಪ್ಪಿಕೊಳ್ಳಲಿ
ಇಲ್ಲದಿದ್ದರೆ ಕೇಸ್ ಹಾಕಲಿರಾಜ್ಯ ಸರ್ಕಾರದಿಂದ ಕಮಿಷನ್ ದಂಧೆ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಎಂದು ಅವರೇ ಘೋಷಣೆ ಮಾಡಿದ್ದಾರೆ. ಆದರೆ, ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರ ಯಾವೊಬ್ಬ ಮಂತ್ರಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಿನ ಕಮಿಷನ್ ಕೊಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಳಿದ್ದಾರೆ. ಆದರೆ, ಶೇ.60 ಕಮಿಷನ್ ನಿಜಕ್ಕೂ ಕೊಳ್ಳುತ್ತಾರೆ ಎಂದು ಯಾರು ಹೇಳಿಲ್ಲ. ರಾಜ್ಯ ಸರ್ಕಾರ ಇದು ಕಮಿಷನ್ ದಂಧೆ ಒಪ್ಪಿಕೊಳ್ಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಕೇಸ್ ಹಾಕಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಾಂಗ್ರೆಸ್ ಸರ್ಕಾರ ಅಧಿಕಾರವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಚಿವ ಜಮೀರ್ ಅಹಮದ್ ಆಶ್ರಯ ಮನೆಗಳಿಗೆ ಕೀ ಕೊಟ್ಟು ಮತ್ತೆ ವಾಪಸ್ ಪಡೆದಿದ್ದಾರೆ. ಅಲ್ಲಿ ಕುಡಿಯುವ ನೀರು ಸೇರಿದಂತೆ ಸಮಸ್ಯೆಗಳಿವೆ ಎಂದು ಆರೋಪಿಸಿದರು.
ಇನ್ನು ಮೈಸೂರು ದಸರಾ ಸಾಹಿತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಾಹಿತಿ ಬಾನು ಮುಷ್ತಾಕ್ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ, ಮೈಸೂರಿನ ವಿಜಯದಶಮಿ ದಸರಾ ಆಚರಣೆ ವೇಳೆ ಬಾನು ಮುಷ್ತಾಕ್ ರನ್ನು ಬರದಿದ್ದರೆ, ಚಾಮುಂಡಿ ಪೂಜೆ ಮಾಡಲು ಭಾನು ಮುಷ್ತಾಕ್‌ಗೆ ಆಸಕ್ತಿ ಇದ್ದು ಅವರನ್ನು ಕರೆದಿದ್ದರೆ ಸಂತೋಷ. ಇಲ್ಲದಿದ್ದರೆ ಹಿಂದೂ ಸಮಾಜಕ್ಕೆ ಬಾನು ಮುಷ್ತಾಕ್ ಹಾಗೂ ಮುಖ್ಯಮಂತ್ರಿಗಳು ಅಪಮಾನ ಮಾಡಿದಂತಾಗುತ್ತದೆ ಎಂದ ಅವರು, ನಾನು ಚಾಮುಂಡಿ ಪೂಜೆ ಮಾಡುತ್ತೇನೆ ಎಂದು ಬಾನು ಮುಷ್ತಾಕ್ ಹೇಳಿಕೆ ನೀಡಿದರೆ ನನ್ನ ವಿರೋಧ ಇಲ್ಲ ಎಂದರು.ಶಿವಮೊಗ್ಗ ದಸರಾದಲ್ಲಿ ಅನೇಕ ತಹಸೀಲ್ದಾರ್‌ಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಇದ್ದಾಗ ಅವರು ಪೂಜೆ ಮಾಡಿ ಅಂಬು ಕಡಿಯುತ್ತಿದ್ದರು. ಅದೇ ರೀತಿ ಬಾನು ಮುಷ್ತಾಕ್ ಚಾಮುಂಡಿಗೆ ಪೂಜೆ ಮಾಡಿ ದಸರಾ ಉದ್ಘಾಟನೆ ಮಾಡುವುದಾದರೆ ನಮ್ಮ ಅಭ್ಯಂತರ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.