ಕನ್ನಡಪ್ರಭ ವಾರ್ತೆ ವಿಜಯಪುರ
ಇಂದು ಗಿಡಗಳನ್ನು ನೆಟ್ಟು, ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನೀಡುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಆರ್‌ಕೆಎಂ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಕರೆ ನೀಡಿದರು.ನಗರದ ಆರ್‌ಕೆಎಂ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರ್‌ಕೆಎಂ ಆಸ್ಪತ್ರೆ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ನೂತನ ಯೋಜನೆ ಆರಂಭಿಸಿದೆ. ಇದರಡಿ ಗಿಡ ನೆಟ್ಟಿರುವುದನ್ನು ದೃಢೀಕರಿಸುವ ಛಾಯಾಚಿತ್ರ ನೋಂದಣಿ ಸಮಯದಲ್ಲಿ ತೋರಿಸುವ ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳ ಮೇಲೆ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು. ಈ ವಿನೂತನ ಯೋಜನೆ ಸಾರ್ವಜನಿಕರಲ್ಲಿ ವೃಕ್ಷಾರೋಪಣ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದೆ ಎಂದ ಅವರು, ಪರಿಸರ ದಿನಾಚರಣೆ ನಿಮಿತ್ತ ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಒಂದು ವಾರದಿಂದ ಪ್ರಕೃತಿ ಛಾಯಾಚಿತ್ರ ಸ್ಪರ್ಧೆ, ಪೋಸ್ಟರ್ ಪ್ರದರ್ಶನ, ರೀಲ್ಸ್ ತಯಾರಿಕೆ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗಿದೆ ಎಂದರು.
ಪ್ರಾಂಶುಪಾಲ ಡಾ.ಎನ್.ಎಂ. ರುದ್ರಗೌಡರ ಮಾತನಾಡಿ, ಹಸಿರು ಮತ್ತು ಸ್ವಚ್ಛ ಕ್ಯಾಂಪಸ್ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹಾಗೂ ಪರಿಸರ ಸಂರಕ್ಷಣೆಯನ್ನು ಜೀವನದ ಭಾಗವನ್ನಾಗಿಸಿಕೊಳ್ಳುವಂತೆ ಸಲಹೆ ನೀಡಿದರು. ಈಗಾಗಲೇ ನಮ್ಮ ವಿದ್ಯಾರ್ಥಿಗಳು ನಗರದ ಸುಕೂನ್ ಲೇಔಟ್ ಹಾಗೂ ಎಂ.ಬಿ. ಪಾಟೀಲ ನಗರ ಪ್ರದೇಶಗಳ ಮನೆಗಳಿಗೆ ಭೇಟಿ ನೀಡಿ 500ಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ವೃಕ್ಷಾರೋಪಣ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.ಈ ವೇಳೆ ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಪೊಲೀಸಪಾಟೀಲ, ಸಹಾಯಕ ಪ್ರಾಧ್ಯಾಪಕಿ ಡಾ.ಪುಷ್ಪಾ ಹೆಬ್ಬಾಳ, ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.