ಕನ್ನಡಪ್ರಭ ವಾರ್ತೆ ಇಳಕಲ್
ಕಳೆದ ೧೦ರಿಂದ ೧೨ ದಿನಗಳಿಂದ ೨೪*೭ ಶುದ್ಧ ಕುಡಿಯುವ ನೀರು ಬರುತ್ತಿಲ್ಲ ಎಂದು ವಾರ್ಡ್ ನಂ.೧ ಹಾಗೂ ಸುತ್ತ-ಮುತ್ತಲಿನ ಜನತೆಯು ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಕಚೇರಿ ಮುಂದಿನ ರಸ್ತೆಯನ್ನು ಬಂದ್ ಮಾಡಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.೨೪*೭ ಕುಡಿಯುವ ನೀರಿನ ಬಗ್ಗೆ ಕಳೆದ ೧೫ ದಿನಗಳಿಂದ ಬೇರೆ ಬೇರೆ ವಾರ್ಡಿನ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ ನಗರಸಭೆಗೆ ಬೀಗ ಜಡಿದು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ೨೪*೭ ನೀರು ಬಿಡುವವರು ನೀರನ್ನು ಅತಿ ಸಣ್ಣದಾಗಿ ಬಿಡುತ್ತಾರೆ. ಅದು ಮಧ್ಯರಾತ್ರಿ ೧೨ ರಿಂದ ೨ರವರೆಗೆ ಬಿಡುತ್ತಾರೆ. ಇದರಿಂದಾಗಿ ಜನರು ಹಗಲು ನೀರು ಬರುತ್ತವೆ ಎಂದು ಕಾಯುತ್ತಾರೆ. ರಾತ್ರಿ ಸಹ ನೀರಿಗಾಗಿ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಿಗಾಗಿ ಒಂದು ದಿನ ಕೆಲಸ ಬಿಟ್ಟು ಕಾಯಬೇಕಾದ ಪರಿಸ್ಥಿತಿ ಬಂದಿದೆ. ಗ್ರಾಮ ಅಭಿವೃದ್ಧಿ ಅಧಿಕಾರಿಗಳ (ಗ್ರಾಮಚೌಡಿ) ಕಚೇರಿ ಮುಂದೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮಹಿಳೆಯರು ಖಾಲಿ ಕೊಡದೊಂದಿಗೆ ಪ್ರತಿಭಟನೆಗೆ ಇಳಿದರೆ ಪುರುಷರು ನಗರಸಭೆ ಅಧಿಕಾರಿಗಳಿಗೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟರ ಅಧಿಕಾರಿಗಳ ವಿರುದ್ಧ ಕಿಡಕಾರಿದರು.ನೂತನ ಮೋಟಾರ್ ಯಾವಾಗ ಅಳವಡಿಸುತ್ತೀರಿ ಎಂಬ ಮಾಧ್ಯದವರ ಪ್ರಶ್ನೆಗೆ ಈಗಾಗಲೇ ಮೋಟಾರ್‌ಗಳು ಬಂದಿವೆ. ಆರಂಭವಾಗಬೇಕಾದರೆ ಕನಿಷ್ಠ ಎರಡು ತಿಂಗಳಾದರೂ ಬೇಕಾಗುತ್ತದೆ. ಅಲ್ಲಿಯವರೆಗೂ ಸರಿಯಾಗಿ ನೀರು ಸರಬರಾಜು ಮಾಡುತ್ತೇವೆ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಭರವಸೆ ನೀಡಿದರು.
ಈ ವೇಳೆ ಮಾರ್ಕಂಡಯ್ಯ ಸಾಕಾ, ಕಠಾರೆ ಮತ್ತು ಪಾಟೀಲ್ ಅಲ್ಲದೆ ನಗರಸಭೆ ಇನ್ನಿತರ ನೌಕರರ ವರ್ಗ ಉಪಸ್ಥಿತರಿದ್ದರು.