ಕನ್ನಡಪ್ರಭ ವಾರ್ತೆ ವಿಜಯಪುರ

ಹಿಜಾಬ್ ಅನುಮತಿ ಹಿಂಪಡೆಯುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯಬಿದ್ದರೆ ಜೈಲಿಗೆ ಹೋಗಲು ಸಿದ್ಧ. ನಮ್ಮ ಹಿಂದೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಕೇಸರಿ ಶಾಲು ಹಾಕಿಕೊಂಡೇ ಹೋಗುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ದರಬಾರ ಕಾಲೇಜು ಹತ್ತಿರ ಶುಕ್ರವಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಪರ್ಯಾಯವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವ ವೇಳೆ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ ನಂತರ ಮಾತನಾಡಿದರು. ಹಿಜಾಬ್‌ಗೆ ಅವಕಾಶ ನೀಡುವುದಾದರೆ ಕೇಸರಿ ಶಾಲಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಶಾಲಾ-ಕಾಲೇಜುಗಳಲ್ಲಿ ಶಿಸ್ತಿನ ಪ್ರತೀಕವಾಗಿ ಸಮವಸ್ತ್ರ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಮುಸ್ಲಿಮರನ್ನು ಖುಷಿಪಡಿಸಲು ನ್ಯಾಯಾಲಯದಲ್ಲಿದ್ದರೂ ರಾಜ್ಯ ಸರ್ಕಾರ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಈ ಆದೇಶ ಹೊರಬಿದ್ದ ಸಂದರ್ಭದಲ್ಲೇ ಪರ್ಯಾಯವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಹಾಗೂ ಹಣೆಗೆ ಕೇಸರಿ ತಿಲಕ ಹಚ್ಚಿಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿತ್ತು.

ಆ ನಿಟ್ಟಿನಲ್ಲಿ ಸರ್ಕಾರ ಹಿಜಾಬ್‌ಗೆ ಅನುಮತಿ ಆದೇಶ ಹಿಂಪಡೆಯಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಲು ಮುಂದಾಗಿದ್ದೆವು. ಆದರೆ, ನಾವು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಪೊಲೀಸರು ಬಂಧಿಸುವ ಮೂಲಕ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಾಂಗ್ರೆಸ್ ಸರ್ಕಾರ ಇದೇ ರೀತಿ ಹಿಂದೂ ವಿರೋಧಿ ನೀತಿ ಮುಂದುವರಿಸಿದರೆ ಪಶ್ಚಿಮ ಬಂಗಾಳದಂತೆ 2028ರಲ್ಲಿ ಕರ್ನಾಟಕದಲ್ಲಿಯೂ ಧೂಳಿಪಟ ಆಗುವುದು ನಿಶ್ಚಿತ. ಇಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನ ನಡೆಯುತ್ತದೆ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯ ಸಂವಿಧಾನ ನಡೆಯುವುದಿಲ್ಲ. ಮುಸ್ಲಿಂ ತುಷ್ಟಿಕರಣ ಸಹಿಸಲಾಗುವುದಿಲ್ಲ. ಹಿಂದೂಗಳ ಹೋರಾಟಗಳು, ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್ ಚಟುವಟಿಕೆಗಳು ಹಾಗೂ ಹಿಂದೂಗಳ ಹಬ್ಬ ಹರಿದಿನಗಳಿಗೆ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಇದೇ ರೀತಿಯಾದರೆ ರಾಜ್ಯ ದಂಗೆ ಏಳುತ್ತದೆ. ಅಗತ್ಯ ಬಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ ತಡೆದು, ಬಂಧಿಸಿದ ಪೊಲೀಸರ ವಿರುದ್ಧ ಹಾಗೂ ಮುಸ್ಲಿಂ ತುಷ್ಟಿಕರಣಕ್ಕಾಗಿ ಪೊಲೀಸರ ಮೂಲಕ ಹಿಂದೂ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಕೂಗಿದರು.

ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಜವಾಹರ ಗೋಸಾವಿ, ಕುಮಾರ ಗಡಗಿ, ಗಿರೀಶ ಬಿರಾದಾರ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಶಂಕರ ಹೂಗಾರ, ಅಶೋಕ ಬೆಲ್ಲದ, ವಿಠ್ಠಲ ನಡುವಿನಕೇರಿ, ರಾಜು ಜಾಧವ, ರಾಜಶೇಖರ ಬಜಂತ್ರಿ, ನಾಗರಾಜ ಮುಳವಾಡ, ಪಾರೀಶ ಶಿರಹಟ್ಟಿ, ಸಿದ್ದನಗೌಡ ಬಿರಾದಾರ, ಬಸವರಾಜ ಲವಗಿ, ಭೀಮು ಮಾಶ್ಯಾಳ, ಬಸವರಾಜ ಬಿರಾದಾರ, ರಾಚು ಬಿರಾದಾರ, ಪ್ರವೀಣ ನಾಟೀಕಾರ, ಸಂತೋಷ ಕವಟೇಕರ ಸೇರಿದಂತೆ ಹಿಂದೂ ಕಾರ್ತಕರ್ತರು ಭಾಗವಹಿಸಿದ್ದರು.ರಾಜ್ಯ ಸರ್ಕಾರ 20 ತಿಂಗಳು ಉಳಿಯಲ್ಲ: ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ, ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಪಟ್ಟು ಬಿಡಬಾರದು. ರಾಮಲಿಂಗಾರೆಡ್ಡಿ ಒಳ್ಳೆಯ ವ್ಯಕ್ತಿ. ಬೆಂಗಳೂರಲ್ಲಿ ಜಲಸಂಪನ್ಮೂಲ ತೆಗೆದುಕೊಂಡು ರಾಮಲಿಂಗಾರೆಡ್ಡಿ ಏನು ಮಾಡಬೇಕು? ನೀರಾವರಿ ಖಾತೆ ಉತ್ತರ ಕರ್ನಾಟಕದ ಸಚಿವರಿಗೆ ಕೊಡಬೇಕು. ಹಿಂದಿನ ನೀರಾವರಿ ಸಚಿವರು ನೀರಾವರಿ ಇಲಾಖೆ ಖಜಾನೆ ಖಾಲಿ ಮಾಡಿ ಹೋಗಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು ಬಂಗಾರದ ಗಣಿ, ಕೃಷ್ಣಬೈರೇಗೌಡರು ದುಡ್ಡಿನ ವ್ಯಾಮೋಹದವರಲ್ಲ. ಆ ಇಲಾಖೆಯನ್ನು ತಾವೇ ಇನ್ ಡೈರೆಕ್ಟ್‌ (ಪರೋಕ್ಷವಾಗಿ) ಆಗಿ ನೋಡಿಕೊಳ್ಳಬೇಕು ಎಂದು ಡಿಕೆಶಿ ಲೆಕ್ಕಾಚಾರವಿದೆ. ಕಾಂಗ್ರೆಸ್ ಸೇರಿ ಯಾವ ಪಕ್ಷದಲ್ಲೂ ಒಳ್ಳೆಯವರಿಗೆ ಕಾಲ ಇಲ್ಲ. ರಾಮಲಿಂಗಾರೆಡ್ಡಿ ರಾಜೀನಾಮೆ ಮೂಲಕ ಸರ್ಕಾರದಲ್ಲಿ ಭಿನ್ನಮತ ಪ್ರಾರಂಭ ಆಗಿದೆ. ಕರ್ನಾಟಕದಲ್ಲಿ ಮೊದಲ ವಿಕೆಟ್ ಪತನ, ಸರ್ಕಾರ 20 ತಿಂಗಳು ನಡೆಯಲ್ಲ. ಅಪಸ್ವರ ಶುರುವಾಗಿದೆ. ರಾಜ್ಯ ಸರ್ಕಾರ 20 ತಿಂಗಳು ಉಳಿಯಲ್ಲ, ಹಿಂದೂ ವಿರೋಧಿ ಸರ್ಕಾರ ಉಳಿಯಲ್ಲ. ರಾಜೀನಾಮೆ ಪರ್ವ ಮುಂದುವರಿಯಲಿದೆ. ರಾಮಲಿಂಗಾರೆಡ್ಡಿ ಹಿಂದೆ ಸರಿಯಬಾರದು, ರಾಜೀನಾಮೆ ಅಂಗೀಕಾರ ಆಗಬೇಕು. ನಗರಾಭಿವೃದ್ಧಿ ಬಂಗಾರದ ಕಣಜ ರಾಮಲಿಂಗಾರೆಡ್ಡಿಗೆ ಸಿಗಬೇಕು. ಆಗ ಭ್ರಷ್ಟಾಚಾರದ ದಾಹ ಕಡಿಮೆ ಆಗುತ್ತದೆ ಎಂದರು.