ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆ ಅತ್ಯಂತ ಖುಷಿ ತಂದಿದೆ. ಇಲ್ಲಿನ ಶಿಕ್ಷಕರು, ಅಧಿಕಾರಿಗಳು ನೀಡಿದ ಸಹಕಾರ ಸ್ಮರಣೀಯ. ತಮಗೆ ಉತ್ತಮ ಕೆಲಸ ಮಾಡಿದ ಆತ್ಮತೃಪ್ತಿ ಸಿಕ್ಕಿದೆ ಎಂದು ಡಯಟ್ ಪ್ರಾಂಶುಪಾಲ, ಶಾಲಾ ಶಿಕ್ಷಣ ಇಲಾಖೆ ಅಕಾಡೆಮಿಕ್ ಉಪನಿರ್ದೇಶಕ ಕೃಷ್ಣಮೂರ್ತಿ ಹೇಳಿದರು.ನಗರದ ಸ್ಕೌಟ್ಸ್‌ ಭವನದಲ್ಲಿ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕ ಸಂಘಟನೆಗಳು, ಡಯಟ್ ಅಧಿಕಾರಿ, ಸಿಬ್ಬಂದಿ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಶಿಕ್ಷಕ ವೃತ್ತಿಯ ಘನತೆ ಉಳಿಸಿ ಕೋಲಾರದ ಘನತೆ ಹೆಚ್ಚಿಸಿ ಎಂದರು. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿರ್ವಹಿಸಿದ ಜವಾಬ್ದಾರಿಗಳು ನನಗೆ ತೃಪ್ತಿ ತಂದಿದೆ ಮತ್ತು ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಇದಕ್ಕಾಗಿ ಎಲ್ಲರ ಸಹಕಾರವೂ ಸಿಕ್ಕಿದೆ ಎಂದು ಧನ್ಯವಾದ ಸಲ್ಲಿಸಿದರು.ಜಿಲ್ಲೆಯಲ್ಲಿ ನಾನು ಡಿಡಿಪಿಐ ಆಗಿದ್ದಾಗ ಎಲ್ಲಾ ಶಾಲೆಗಳಿಗೂ ಇ-ಖಾತಾ ಮಾಡಿಸುವಲ್ಲಿ ಡಿಸಿಯವರ ಮಾರ್ಗದರ್ಶನದಲ್ಲಿ ಯಶಸ್ಸು ಸಾಧಿಸಿದ್ದೇವೆ, ಈ ಕಾರ್ಯ ತಮಗೆ ಹೆಚ್ಚಿನ ಸಂತಸ ತಂದಿದೆ. ತಮ್ಮ ತಂದೆ ತಾಯಿಯನ್ನು ಹಾಗೂ ತಮಗೆ ಕೆಲಸ ಸಿಕ್ಕ ದಿನಗಳಲ್ಲಿ ತಾವು ವಿವಿಧ ಸ್ಥಳಗಳಲ್ಲಿ ಮತ್ತು ಅಧಿಕಾರದಲ್ಲಿ ಭಾಗವಹಿಸಿದ ದಿನಗಳನ್ನು ನೆನೆಸಿಕೊಂಡು ಭಾವುಕರಾದರು.

ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿ, ಶಿಕ್ಷಕರಾಗಿ ಮಾಡುವ ಕೆಲಸ ನಮ್ಮ ಜೀವನವಿಡಿ ನೆನಪಿನಲ್ಲಿರುತ್ತದೆ, ಇಂತಹ ಪವಿತ್ರ ವೃತ್ತಿಯಿಂದ ಬಂದವರಾಗಿದ್ದು, ನಂತರ ಅಧಿಕಾರಿಯಾಗಿ ಅದೇ ಶಿಕ್ಷಕರ ನೇತೃತ್ವ ವಹಿಸಿ ಮುನ್ನಡೆಯುವುದು ಜೀವನದ ಸಾರ್ಥಕತೆ ಎಂದರು.ಡಯಟ್ ಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ಅವರೊಂದಿಗೆ ನಾನು ಕೆಲಸ ಮಾಡಿದ್ದು, ಅವರ ಸರಳತೆ, ಸಜ್ಜನಿಕೆ ಮೆಚ್ಚುವಂತದ್ದು, ಅವರ ನಿವೃತ್ತಿ ಜೀವನವೂ ಅವರಿಗೆ ಹೆಚ್ಚಿನ ಸಂತಸ ತರಿಸಲಿದೆ ಎಂದು ತಿಳಿಸಿ, ಡಯಟ್ ಪರವಾಗಿ ಅಭಿನಂದಿಸಿದರು.ನಿವೃತ್ತ ಬಿಇಒ ಕನ್ನಯ್ಯ, ಡಯಟ್ ಉಪನ್ಯಾಸಕ ಬಾಲಾಜಿ ಮಾತನಾಡಿ ಕೃಷ್ಣಮೂರ್ತಿ ಅವರಿಗೆ ಶುಭ ಕೋರಿದರು. ಡಯಟ್ ಉಪನ್ಯಾಸಕ ನಾರಾಯಣಸ್ವಾಮಿ ನಿರೂಪಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ಡಾ.ಎಸ್.ಆರ್.ವೀಣಾ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಮೋಹನ್ ಬಾಬು, ಬಿ.ಜಿ. ನಾರಾಯಣಸ್ವಾಮಿ, ರಘುನಾಥರೆಡ್ಡಿ,ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಸಮೀವುಲ್ಲ, ಶರಣಪ್ಪ ಜಮಾದಾರ್, ಸ್ಕೌಟ್ ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಾಲೂಕು ಅಧ್ಯಕ್ಷ ವೆಂಕಟಾಚಲಪತಿಗೌಡ, ಎಸ್ಸಿಎಸ್ಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುನಿಯಪ್ಪ, ನೌಕರರ ಸಂಘದ ನಿರ್ದೇಶಕ ಗೋವಿಂದ್ ಇದ್ದರು.