ಕನ್ನಡಪ್ರಭ ವಾರ್ತೆ ಇಂಡಿ
ಕಳೆದ 60 ವರ್ಷಗಳಲ್ಲಿ ಯಾವುದೇ ಸರ್ಕಾರಗಳಿಂದ ಸಾಧ್ಯವಾಗದ್ದನ್ನು 12 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಮಾಡಿ ತೋರಿಸಿದ್ದಾರೆ. ದೇಶದ ಪ್ರಧಾನ ಮಂತ್ರಿಗಳಾಗಿ 12 ವರ್ಷ ಯಶಸ್ವಿಯಾಗಿ ಪೂರೈಸಿದ ಹಾಗೂ ದೇಶದ ಇತಿಹಾಸದಲ್ಲಿ ಅತ್ಯಧಿಕ ಅವಧಿಯವರೆಗೆ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ನಾಯಕರಾಗಿ ದಾಖಲೆ ಬರೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ತಾಲೂಕಿನ ಜೇವೂರ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಇಂಡಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡ ಪ್ರಧಾನಿ ಮೋದಿಯವರ 12 ವರ್ಷದ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ಮೋದಿಯವರು ನನ್ನ ಮೇಲೆ ಬಹಳ ಕಾಳಜಿ ಹೊಂದಿದ್ದಾರೆ. ನಿನ್ನ ಅದೃಷ್ಟ ಬಹಳ ಚೆನ್ನಾಗಿದೆ ಎಂದು ಹಾರೈಸಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಹೊಸ ಗುರುತು ಪಡೆದಿದೆ. ಅಭಿವೃದ್ಧಿ, ಆರ್ಥಿಕ ಪ್ರಗತಿ, ರಾಷ್ಟ್ರೀಯ ಭದ್ರತೆ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳಾಗಿದ್ದು, ವಿಶ್ವದ ರಾಷ್ಟ್ರಗಳು ಭಾರತದತ್ತ ಗೌರವದಿಂದ ನೋಡುವಂತಾಗಿದೆ. ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲಾ ಯೋಜನೆ, ಜಲ ಜೀವನ್ ಮಿಷನ್, ಆಯುಷ್ಮಾನ್ ಭಾರತ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಸೇರಿ ಹಲವು ಜನಪರ ಯೋಜನೆಗಳು ದೇಶದ ಕೋಟ್ಯಂತರ ಜನರ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಿವೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಉಗ್ರವಾದ ವಿರುದ್ಧ ಕಠಿಣ ನಿಲುವು, ಗಡಿ ಭದ್ರತೆ ಬಲಪಡಿಸುವ ಕ್ರಮಗಳು ಹಾಗೂ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿಯ ರದ್ಧತಿ, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿ ಹಲವು ಮಹತ್ವದ ನಿರ್ಧಾರಗಳನ್ನು ಮೋದಿ ಸರ್ಕಾರ ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿಯೂ ಭಾರತ ಮಹತ್ವದ ಸ್ಥಾನ ಗಳಿಸಿದ್ದು, ಜಿ-20 ಶೃಂಗಸಭೆಯ ಯಶಸ್ವಿ ಆಯೋಜನೆ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಭಾವ ವೃದ್ಧಿ ಹಾಗೂ ವಿದೇಶಾಂಗ ನೀತಿಯ ಬಲವರ್ಧನೆಯಿಂದ ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಿಂದ ಭಾರತ ಆತ್ಮನಿರ್ಭರತೆ, ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಕಳೆದ 12 ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆತಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಕಳೆದ ಒಂದು ದಶಕದಲ್ಲಿ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವವು ಅಭೂತಪೂರ್ವ ಅಭಿವೃದ್ಧಿ, ಉತ್ತಮ ಆಡಳಿತ, ಸಾಮಾಜಿಕ ಸಬಲೀಕರಣ ಮತ್ತು ರಾಷ್ಟ್ರೀಯ ಪುನರುಜ್ಜಿವನ ಯುಗಕ್ಕೆ ನಾಂದಿ ಹಾಡಿದೆ. ಮೂಲಸೌಕರ್ಯ, ಡಿಜಿಟಲ್ ರೂಪಾಂತರ, ಕಲ್ಯಾಣ ಕಾರ್ಯಕ್ರಮ, ಉತ್ಪಾದನೆ, ಆರೋಗ್ಯ, ರಕ್ಷಣೆ ಮತ್ತು ಜಾಗತಿಕ ಒಪ್ಪಂದಗಳು ಸೇರಿದಂತೆ ಹಿಂದೆಂದೂ ಸಾಧಿಸಲಾದ ಗಮನಾರ್ಹ ಪ್ರಗತಿ ರಾಷ್ಟ್ರದ ಸೇವೆಗೆ ಅವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ವಿಕಸಿತ ಭಾರತದ ದೃಷ್ಟಿಕೋನ ಮತ್ತು ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಮುನ್ನಡೆಸಲು ಬದ್ಧರಾಗಿದ್ದಾರೆ ಎಂದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಕಾಪಸೆ ಮಾತನಾಡಿದರು.
ರಾಜಕುಮಾರ ಸಗಾಯಿ, ಬತ್ತುಸಾಹುಕಾರ ಹಾವಳಗಿ, ಸಿದ್ದು ಮಂಗಳವೇಡೆ, ಪ್ರಶಾಂತ ಗವಳಿ, ಈರಣ್ಣ ರಾವೂರ, ಬಸುಗೌಡ ಪಾಟೀಲ, ನಾಗು ಹುನ್ನೂರ, ರಾಜುಗೌಡ ಪಾಟೀಲ, ಶಿವಶರಣ ಮೇಲಿನಮನಿ, ಸಿಕಂದರ ಬೊರಾಮಣಿ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.