ಕಾರಟಗಿ: ದೇಶದ ಆರ್ಥಿಕ ಪರಿಸ್ಥಿತಿ ಸದ್ಯ ಸಂಪೂರ್ಣ ಹದಗೆಟ್ಟು ಅಧೋಗತಿಗೆ ಹೋಗಿದ್ದು, ತೈಲ ಬೆಲೆ ಗಗನಕ್ಕೇರಿದೆ. ಈ ಸತ್ಯ ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಈಗ ಎಚ್ಚರಿಕೆ ಮಾತುಗಳಲ್ಲಿ ಬಂಗಾರ ಖರೀದಿಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದು ಉಚಿತ ಸಲಹೆ ನೀಡಿ ತಮ್ಮ ಆಡಳಿತ ವೈಫಲ್ಯ ಮರೆಮಾಚುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು.

ಇನ್ನು ನೀಟ್ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಲೀಕ್ ಆಗಿದೆ, ಆರ್ಥಿಕ ವ್ಯವಸ್ಥೆ ವೀಕ್ ಆಗಿದೆ, ಶೇರುಪೇಟೆ ಮಾರುಕಟ್ಟೆ ಶೇಕ್ ಆಗಿದೆ, ಈ ಮೂರು ಈ ದೇಶದ ಮೋದಿ ಆಡಳಿತದ ದುರಾವಸ್ಥೆ ಸ್ಪಷ್ಟವಾಗಿ ತೋರಿಸುತ್ತದೆ ಎಂದರು.ಯಲ್ಲಮ್ಮನ ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ಮುಂದೆ ಇದ್ದವರು ಯಲ್ಲಮ್ಮ ನೀನಗ ನಾಲ್ಕು ಉಧೋ ಎಂದರೆ ಸಾಕು ಹಿಂದಿದ್ದವರೆಲ್ಲರೂ ಉಧೋ ಉಧೋ ಎನ್ನಲು ಶುರು ಮಾಡುತ್ತಾರೆ. ಹಾಗೆಯೇ ಮೋದಿ ಅಂಧ ಭಕ್ತರು ಅವರ ನಡೆಯನ್ನೆ ಬೆಂಬಲಿಸುತ್ತಾರೆ. ಸೈಕಲ್ ಮೇಲೆ ಓಡಾಡುವುದು ದೇಶಭಕ್ತಿ ಅಲ್ಲ. ದೇಶದ ಆರ್ಥಿಕ ಸ್ಥಿತಿ ಹಳ್ಳ ಹಿಡಿದಿದೆ ಎನ್ನುವುದು ಇಡೀ ವಿಶ್ವಕ್ಕೆ ಬಿಜೆಪಿ ತೋರಿಸಿಕೊಡುತ್ತಿದೆ ಎಂದು ತಂಗಡಗಿ ಟೀಕಿಸಿದರು. ದೇಶದೊಳಗೆ ಆಡಳಿತ ಮಾಡಲು ಗೊತ್ತಿರಲಾರದ ಒಬ್ಬನನ್ನು ಪ್ರಧಾನ ಮಂತ್ರಿ ಮಾಡಿದರೆ ದೇಶಕ್ಕೆ ಇದೇ ಪರಿಸ್ಥಿತಿ ಬರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಲು ಸಾಧ್ಯವಿದ್ದವರು ಬಂದು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುತ್ತಾರೆ. ಅದನ್ನು ಬಿಟ್ಟು ದೇಶದ ಜನತೆಗೆ ಪುಕ್ಕಟೆ ಸಲಹೆ ನೀಡುವುದು ದೊಡ್ಡಸ್ತಿಕೆಯಲ್ಲ. ದೇಶದಲ್ಲಿ ಉದ್ಭವಿಸಿರುವ ಈ ಸಮಸ್ಯೆ ಯುದ್ಧದಿಂದಲ್ಲ. ಒಬ್ಬ ಪೆದ್ದನ ದುರಾಡಳಿತವಾಗಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರೆ ಹೇಳಿದ್ದಾರೆ. ವಸ್ತುಸ್ಥಿತಿ ಹೀಗಿದ್ದ ಮೇಲೆ ಮೋದಿ ಅವರ ಅಂಧಭಕ್ತರು ದೇಶ ಅಧೋಗತಿಗೆ ಹೋಗಿದೆ ಎಂಬುದನ್ನು ಅರಿತುಕೊಂಡು ಸತ್ಯ ಅರಿಯಬೇಕು, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ, ರಾಜ್ಯದ ಮುಖ್ಯಮಂತ್ರಿ ಬಗ್ಗೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಮಾತನಾಡಲು ಹಿರಿಯರಾದ ಬಸವರಾಜ ರಾಯರೆಡ್ಡಿ ಅವರಿಗೆ ಬಿಟ್ಟಿದ್ದೇವೆ. ನಾವೇನಿದ್ದರೂ ಪಕ್ಷ ವಹಿಸಿ ಕೆಲಸ ಮಾತ್ರ ಮಾಡುತ್ತೇವೆ. ಸಂಪುಟ ರಚನೆ, ಸೇರಿದಂತೆ ಎಲ್ಲ ರಚನೆಗಳನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಷ್ಟೇ ತಂಗಡಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷದ ಹೈಕಮಾಂಡ್ ವಹಿಸಿದ ಕೆಲಸ ಕಾರ್ಯ ಮಾತ್ರ ಮಾಡಬೇಕು. ಇತರ ಯಾವುದೇ ವಿಷಯ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಪಕ್ಷ ವಹಿಸಿದ ಕೆಲಸವನ್ನಷ್ಟೇ ಶಿರಸಾವಹಿಸಿ ಮಾಡುತ್ತಾ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ ಎಂದರು. ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡ ಬಸವರಾಜ ಬೂದಿ, ಸದಸ್ಯರಾದ ಎಚ್. ಈಶಪ್ಪ, ಹಿರೇಬಸಪ್ಪ ಸಜ್ಜನ್, ಸೋಮಶೇಖರ ಬರ್ಗಿ, ರಾಜಶೇಖರ ಶಿರಗೇರಿ, ಫಕೀರಪ್ಪ, ವೀರೇಶ ಮುದುಗಲ್, ಬ್ಲಾಕ್‌ ಅಧ್ಯಕ್ಷ ಶರಣೇಗೌಡ ಮಾ. ಪಾಟೀಲ್, ಗ್ಯಾರಂಟಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾಗರಾಜ ಅರಳಿ, ಚೆನ್ನಬಸವ ಸುಂಕದ್, ಕೆ. ಸಿದ್ಧನಗೌಡ, ರಾಜಶೇಖರ ಆನೆಹೊಸೂರ, ಮಹೇಶ ಕಂದಗಲ್, ರಾಜು ದೇವಿಕ್ಯಾಂಪ್, ಅಯ್ಯಪ್ಪ ಉಪ್ಪಾರ, ವೀರೇಂದ್ರ ಹೊನಗುಡಿ ಇದ್ದರು.