ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಬಹುಚರ್ಚಿತ, ವಿವಾದಿತ ಬೃಹತ್ ಯೋಜನೆಯಾಗಿರುವ ಸುರಂಗ ರಸ್ತೆ ನಿರ್ಮಾಣ ಯೋಜನೆಯ ಬಿಡ್ಡಿಂಗ್ ಅಂತಿಮಗೊಳಿಸುವ ಮಾತುಕತೆ ನಡೆಯುತ್ತಿರುವ ನಡುವೆ ಅದಾನಿ ಸಂಸ್ಥೆಯು ನಗರದಲ್ಲಿ ಸುರಂಗ ಮಾರ್ಗದ ಸರ್ವೇ ಕಾರ್ಯ ಆರಂಭಿಸಿದೆ.

ಯೋಜನೆ ಅನುಷ್ಠಾನಗೊಳಿಸಲು ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿರುವ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸುರಂಗ ಮಾರ್ಗ ಸಾಗುವ ಪ್ರದೇಶದಲ್ಲಿ ಪ್ರಾಥಮಿಕ ಭೂ ಸಮೀಕ್ಷೆ ಮತ್ತು ಮಣ್ಣು ಪರೀಕ್ಷೆ ಸೇರಿದಂತೆ ಹತ್ತು ಹಲವು ಪರೀಕ್ಷೆಗಳನ್ನು ಆರಂಭಿಸಿದೆ.

ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆಗೆ ಅದಾನಿ ಸಂಸ್ಥೆ 22,267 ಕೋಟಿ ರು. ಬಿಡ್ಡಿಂಗ್ ಮಾಡಿದೆ. ಸರ್ಕಾರದ ಅಂದಾಜು 17,698 ಕೋಟಿ ರು.ಗಿಂತ ಹೆಚ್ಚು ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ಡಿಂಗ್ ಮಾಡಿದೆ. ಹೀಗಾಗಿ, ಅಂತಿಮ ಗುತ್ತಿಗೆಯನ್ನು ಅಧಿಕೃತವಾಗಿ ನೀಡುವ ಕುರಿತು ಮಾತುಕತೆ ನಡೆಯುತ್ತಿವೆ. ಅದಕ್ಕೂ ಮೊದಲೇ ಸುರಂಗದ ವಿನ್ಯಾಸ ಮತ್ತು ಯೋಜನೆಯ ಸವಾಲುಗಳನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳಲು ಅದಾನಿ ಸಂಸ್ಥೆಯು ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ತಾಂತ್ರಿಕ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಸುರಂಗ ಮಾರ್ಗದ ವಿನ್ಯಾಸ, ವೆಚ್ಚದ ಅಂದಾಜುಗಳು, ನಿರ್ಮಾಣ ವಿಧಾನ, ಬಳಸಬೇಕಾದ ಸುರಂಗ ಕೊರೆಯುವ ಯಂತ್ರಗಳ ಪ್ರಕಾರ ಮತ್ತು ಕೆಲಸದ ಅನುಷ್ಠಾನಕ್ಕೆ ಅಗತ್ಯವಿರುವ ಇತರ ನಿರ್ಮಾಣ ಉಪಕರಣಗಳನ್ನು ಅಭಿವೃದ್ಧಿಪಡಿಸಲು ಈ ಸರ್ವೇ ನೆರವಾಗಲಿದೆ. ಈ ಸರ್ವೇ ವರದಿಯನ್ನು ಸರ್ಕಾರಕ್ಕೆ ಒದಗಿಸಬೇಕು ಎನ್ನುವ ಷರತ್ತು ಗುತ್ತಿಗೆ ಪಡೆಯುವ ಸಂಸ್ಥೆಗಳಿಗೆ ವಿಧಿಸಲಾಗಿದೆ.


ಯಾವುದೇ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಇಂತಹ ತಾಂತ್ರಿಕ ಸಮೀಕ್ಷೆಗಳು ಅತ್ಯಗತ್ಯ. ನಗರದ ಭೌಗೋಳಿಕ ಪರಿಸ್ಥಿತಿ ಮತ್ತು ಎದುರಾಗಬಹುದಾದ ಸವಾಲುಗಳನ್ನು ಅರಿಯಲು ಬಿಡ್‌ದಾರರು ಈ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಆದರೆ, ಯೋಜನೆಗೆ ಸಂಬಂಧಿಸಿದ ಅಂತಿಮ ಒಪ್ಪಂದ ಇನ್ನೂ ಆಗಿಲ್ಲ. ಮಾತುಕತೆಗಳು ಮುಂದುವರಿದಿವೆ ಎಂದು ಯೋಜನೆ ಮೇಲ್ವಿಚಾರಣೆ ನಡೆಸುತ್ತಿರುವ ‘ಬಿ-ಸ್ಮೈಲ್’ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಹೇಳಿದ್ದಾರೆ.

ಒಟ್ಟು ನಾಲ್ಕು ಸಂಸ್ಥೆಗಳು ಮಣ್ಣು ಪರೀಕ್ಷೆ, ಭೂಮಿಯ ಮೇಲ್ಮೈ, ಸುರಂಗ ಮಾರ್ಗದ ಪ್ರದೇಶಗಳು, ನೆಲದಡಿಯ ಪೈಪ್‌, ವೈರ್‌ಗಳು ಮತ್ತಿತರ ತಾಂತ್ರಿಕ ವಿಚಾರಗಳ ಕುರಿತು ಸರ್ವೇ ನಡೆಸುತ್ತಿವೆ ಎಂದು ತಿಳಿದು ಬಂದಿದೆ.