ನಗರದ ಜಿಲ್ಲಾ ಕಾರಾಗೃಹ ಈಗ ಗಲಾಟೆ, ಬಡಿದಾಟದ ತಾಣವಾಗಿ ಮಾರ್ಪಟ್ಟಂತಿದೆ. ಜೈಲರ್ ಹಾಗೂ ಸಿಬ್ಬಂದಿ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಘಟನೆ ಮಾಸುವ ಮುನ್ನವೇ, ಮಂಗಳವಾರ ರಾತ್ರಿ ಮಂಗಳೂರು ಮೂಲದ ಕುಖ್ಯಾತ ಕೈದಿಗಳು ಮತ್ತೆ ದಾಂಧಲೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ​ಕಾರವಾರ

ನಗರದ ಜಿಲ್ಲಾ ಕಾರಾಗೃಹ ಈಗ ಗಲಾಟೆ, ಬಡಿದಾಟದ ತಾಣವಾಗಿ ಮಾರ್ಪಟ್ಟಂತಿದೆ. ಜೈಲರ್ ಹಾಗೂ ಸಿಬ್ಬಂದಿ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಘಟನೆ ಮಾಸುವ ಮುನ್ನವೇ, ಮಂಗಳವಾರ ರಾತ್ರಿ ಮಂಗಳೂರು ಮೂಲದ ಕುಖ್ಯಾತ ಕೈದಿಗಳು ಮತ್ತೆ ದಾಂಧಲೆ ನಡೆಸಿದ್ದಾರೆ. ಬ್ಯಾರಕ್‌ನಲ್ಲಿದ್ದ ಟಿವಿ ಒಡೆದು ಹಾಕಿ, ಜೈಲು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಭೀತಿ ಹುಟ್ಟಿಸಿದ ಘಟನೆ ನಡೆದಿದೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಬ್ಯಾರಕ್ ನಂಬರ್ 2ರಲ್ಲಿದ್ದ 20 ಮಂದಿ ಪೈಕಿ, ಮಂಗಳೂರು ಮೂಲದ ಮೂವರು ವಿಚಾರಣಾಧೀನ ಕೈದಿಗಳು ಏಕಾಏಕಿ ರಂಪಾಟ ಶುರುಮಾಡಿದ್ದಾರೆ. ಜೈಲಿನಲ್ಲಿ ಮನರಂಜನೆಗಾಗಿ ಅಳವಡಿಸಲಾಗಿದ್ದ ಟಿವಿ ಒಡೆದು ಹಾಕಿದ್ದಲ್ಲದೆ, ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೆಟ್ಟ ಶಬ್ದ ಪ್ರಯೋಗಿಸಿ ವಾಗ್ವಾದ ನಡೆಸಿದ್ದಾರೆ. ವಿಷಯ ತಿಳಿದ ತಕ್ಷಣ ಡಿವೈಎಸ್‌ಪಿ ಗಿರೀಶ್ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಅದೃಷ್ಟವಶಾತ್, ಈ ಬಾರಿ ಯಾವುದೇ ಸಿಬ್ಬಂದಿಗೆ ದೈಹಿಕ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಪ್ರಾಥಮಿಕ ತನಿಖೆಯ ಪ್ರಕಾರ ಮೂವರು ಪ್ರಮುಖ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಜೈಲಿನಲ್ಲಿ ನಿಯಮ ಕಟ್ಟುನಿಟ್ಟುಗೊಳಿಸಿರುವುದರಿಂದ ಹತಾಶರಾಗಿ ಈ ರೀತಿ ವರ್ತಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ, ಪದೇ ಪದೇ ಶಿಸ್ತು ಉಲ್ಲಂಘಿಸುತ್ತಿರುವ ಈ ಅಪಾಯಕಾರಿ ಕೈದಿಗಳನ್ನು ಬೇರೆ ಜೈಲಿಗೆ ವರ್ಗಾಯಿಸಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದಷ್ಟೇ ಮಂಗಳೂರು ಜೈಲಿನಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದ ಈ ಏಳು ಮಂದಿ ಕೈದಿಗಳ ಮೇಲೆ ದರೋಡೆ, ಎನ್‌ಡಿಪಿಎಸ್ ಮತ್ತು ಕೊಲೆ ಯತ್ನದಂತಹ(307) ಗಂಭೀರ ಪ್ರಕರಣಗಳಿವೆ. ಕಳೆದ ಶನಿವಾರವಷ್ಟೇ (ಡಿ.6) ಜೈಲರ್ ಕಲ್ಲಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಇದೇ ತಂಡ. ಇದೇ ಕೈದಿಗಳು ಹಿಂದಿನ ಬೇರೆ ಜೈಲುಗಳಲ್ಲಿಯೂ ಕೂಡ ಗಲಾಟೆಗಳನ್ನು ಮಾಡಿದ ಹಿನ್ನೆಲೆ ಅವರನ್ನು ಈ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಜೈಲಿನಲ್ಲಿ ಗಾಂಜಾ ಮತ್ತು ಮೊಬೈಲ್ ಬಳಕೆಗೆ ಕಡಿವಾಣ ಹಾಕಿದ್ದೇ ಈ ಸರಣಿ ಗಲಾಟೆಗಳಿಗೆ ಮುಖ್ಯ ಕಾರಣ ಎನ್ನಲಾಗಿದೆ.

ಸತತ ಎರಡು ಘಟನೆಗಳಿಂದಾಗಿ ಕಾರವಾರ ಜೈಲಿನ ಭದ್ರತಾ ಲೋಪಗಳು ಎದ್ದು ಕಾಣುತ್ತಿವೆ. ಅಲ್ಲದೇ ಸಿಬ್ಬಂದಿ ರೌಡಿಗಳ ಅಟ್ಟಹಾಸದಿಂದಾಗಿ ಕರ್ತವ್ಯ ನಿರ್ವಹಿಸಲು ಭಯಪಡುವಂತಹ ವಾತಾವರಣ ಜಿಲ್ಲಾ ಕಾರಾಗೃಹದಲ್ಲಿ ನಿರ್ಮಾಣವಾಗಿದೆ. ಜೈಲಿನ ಕಾಂಪೌಂಡ್ ಮತ್ತು ಗೋಡೆಗಳು ಹಳೆಯದಾಗಿದ್ದು, ದುರ್ಬಲವಾಗಿವೆ ಎಂಬ ಅಂಶವನ್ನೂ ಎಸ್‌ಪಿ ಒಪ್ಪಿಕೊಂಡಿದ್ದು, ಈ ಕುರಿತು ಕಾರಾಗೃಹ ಇಲಾಖೆಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಈಗಾಗಲೇ ಕೇಸ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ. ಇಂದಿನ ಗಲಾಟೆ ಕುರಿತು ದೂರು ನೀಡಿದರೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಎಸ್ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.