ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯ: ಸದ್ಗುರು

| Published : Nov 12 2025, 01:00 AM IST

ಸಾರಾಂಶ

ಸಾರ್ವಜನಿಕ ಹಣ, ಆಸ್ತಿಯನ್ನು ಪಾರದರ್ಶಕವಾಗಿ ನಿಸ್ವಾರ್ಥ ಅಥವಾ ವಸ್ತುನಿಷ್ಠತೆಯ ತತ್ವಗಳ ಮೇಲೆ ನಿರ್ವಹಿಸಬೇಕು. ನಮ್ಮ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿರಿಸಿಕೊಳ್ಳುವುದು ಮತ್ತು ಸಾಧ್ಯವಾದಷ್ಟು ಕಾಳಜಿಯನ್ನು ವಹಿಸುತ್ತಿದ್ದೇವೆ. ದಕ್ಷತೆಯ ಜೊತೆಗೆ ವೆಚ್ಚಗಳನ್ನು ಕಡಿಮೆ ಮಾಡಿ ವೇಗವಾಗಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ’ದ 87ನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ವೆಚ್ಚ ಕಡಿಮೆ, ವೇಗ ಹೆಚ್ಚು:

ಸಾರ್ವಜನಿಕ ಹಣ, ಆಸ್ತಿಯನ್ನು ಪಾರದರ್ಶಕವಾಗಿ ನಿಸ್ವಾರ್ಥ ಅಥವಾ ವಸ್ತುನಿಷ್ಠತೆಯ ತತ್ವಗಳ ಮೇಲೆ ನಿರ್ವಹಿಸಬೇಕು. ನಮ್ಮ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿರಿಸಿಕೊಳ್ಳುವುದು ಮತ್ತು ಸಾಧ್ಯವಾದಷ್ಟು ಕಾಳಜಿಯನ್ನು ವಹಿಸುತ್ತಿದ್ದೇವೆ. ದಕ್ಷತೆಯ ಜೊತೆಗೆ ವೆಚ್ಚಗಳನ್ನು ಕಡಿಮೆ ಮಾಡಿ ವೇಗವಾಗಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ. ಇದೇ ಕಾರಣಕ್ಕಾಗಿ ನಮ್ಮ ಈ ಸಂಸ್ಥೆಯನ್ನು ಇಷ್ಟೊಂದು ವೇಗವಾಗಿ ಮುಂದಕ್ಕೆ ತಂದಿದ್ದೇವೆ ಎಂದು ವಿವರಿಸಿದರು.

ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಮಾತನಾಡಿ, ಮುದ್ದೇನಹಳ್ಳಿಯ ಸತ್ಯ ಸಾಯಿ ಸಂಸ್ಥೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ, ಉಚಿತ ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಇದು ಅಸಾಧ್ಯವಾದದ್ದು, ಆದರೆ ಇದನ್ನು ಶ್ರೀ ಮಧುಸೂದನ ಸಾಯಿ ಅವರು ಸಾಧ್ಯವಾಗಿಸಿದ್ದಾರೆ. ಮುದ್ದೇನಹಳ್ಳಿಯನ್ನು 3ಎಂ ಎಂದು ಕರೆಯುತ್ತೇನೆ. ಮಧುಸೂದನ ಮುದ್ದೇನಹಳ್ಳಿ ಮಿರಾಕಲ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಗಳಿಗೆ ಪುರಸ್ಕಾರ:

ಸೂರ್ಯ ಫೈನಾನ್ಷಿಯಲ್ ಟೆಕ್ನಾಲಜೀಸ್ ಕಂಪನಿ, ಶ್ರೀ ಸಾಯಿ ಹೀಲಿಂಗ್ ಟ್ರಸ್ಟ್‌ಗೆ ಮತ್ತು ಅನ್ನಪೂರ್ಣ ಟ್ರಸ್ಟ್ ಗೆ ಬೆಂಬಲ ನೀಡುತ್ತಿರುವ ಟ್ರೆಲ್ಲೆಬೋರ್ಗ್ ಸೀಲಿಂಗ್ ಸಲ್ಯೂಷನ್ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಿಂಗಾಪುರದ ಆನ್ಸನ್ ಎನ್ ಜಿ. ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಹೃದಯ ಸಂಬಂಧಿತ ಸಮಸ್ಯೆಯನ್ನು ಅತಿ ಕಡಿಮೆ ಸಮಯದಲ್ಲಿ ಗುಣಮುಖರಾದ ಹಿಂದೂಪುರದ ಶಿಕ್ಷಕಿ ಸ್ನೇಹ ಎಂಬುವರಿಗೆ ಗಿಫ್ಟ್ ಆಫ್ ಲೈಫ್ ಪ್ರಮಾಣಪತ್ರ ವಿತರಿಸಲಾಯಿತು. ಸ್ನೇಹಾ ಅವರಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ.