ರಾಮನಗರ: ಇಂದಿನ ದಿನಗಳಲ್ಲಿ ಮನುಷ್ಯ ಹಣದ ವ್ಯಾಮೋಹಕ್ಕೆ ಸಿಲುಕಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಎಷ್ಟೇ ಹಣ, ಆಸ್ತಿ ಇದ್ದರೂ ಸತ್ತಾಗ ಉಳಿಯುವುದು ನಾವು ಮಾಡಿದ ಒಳ್ಳೆಯ ಕಾರ್ಯಗಳು ಮಾತ್ರ. ಪಾಪ ಪುಣ್ಯಗಳೆರಡೇ ನಮ್ಮ ಹಿಂದೆ ಬರೋದು. ಹಾಗಾಗಿ ಇದ್ದಷ್ಟು ದಿನ ಪುಣ್ಯ ಸಂಪಾದಿಸೋಣ ಎಂದು ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ. ಜಿ.ಬಿ.ಮಲ್ಲೇಶ್ ಗುರೂಜಿ ಹೇಳಿದರು.

ನಗರದ ಕನ್ನಿಕಾ ಮಹಲ್ ನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ ಸಂಸ್ಕೃತಿ ಉತ್ಸವ ಹಾಗೂ ಸಂಸ್ಕೃತಿ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸನ್ಮಾನ ಸರ್ಕಾರಗಳನ್ನು ಕೇಳಿ ಪಡೆವಂತದ್ದಲ್ಲ. ನಡೆದಾಡುವ ದೇವರೆಂದೇ ಹೆಸರಾಗಿದ್ದ ಸಿದ್ಧಗಂಗಾ ಶ್ರೀಗಳು ನಮಗೆ ಆದರ್ಶನೀಯರು. ಅವರೆಂದೂ ಪ್ರಚಾರಕ್ಕಾಗಿ ಸೇವೆ ಮಾಡಲಿಲ್ಲ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ಯಾರು ಪ್ರೋತ್ಸಾಹ ನೀಡಲಿ ಬಿಡಲಿ, ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ರಾ.ಬಿ.ನಾಗರಾಜ್ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು. ಆದರೆ, ಇಂತಹ ಒಬ್ಬ ನಿಸ್ವಾರ್ಥ ಕಲಾವಿದ, ಸಂಘಟಕರನ್ನು ಈ ಸರ್ಕಾರಗಳು, ಸಮಾಜ ಗೌರವಿಸಿ ಗುರುತಿಸುವಲ್ಲಿ ವಿಫಲವಾಗಿವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಸಂಸ್ಕೃತಿ ಪುರಸ್ಕಾರ ಸ್ವೀಕರಿಸಿದ ಕೀರ್ತನಕಾರ ಶಿವಾರ ಉಮೇಶ್ ಮಾತನಾಡಿ, ನಾನು ಪ್ರತಿದಿನ ಸಾವಿರಾರು ಜನರ ಸಮ್ಮುಖದಲ್ಲಿ ಕಾರ್ಯಕ್ರಮ ಕೊಡುತ್ತಿರುತ್ತೇನೆ. ಆದರೆ, ಇಂದು ಪೂಜ್ಯ ಗುರುಗಳ ಸಾನಿಧ್ಯದಲ್ಲಿ, ಕಲ್ಪನೆಗೂ ಮೀರಿದ ವ್ಯಕ್ತಿತ್ವದ ರಾಮಚಂದ್ರಪ್ಪನವರು ಹಾಗೂ ಶಿಲ್ಪಿಗಳಾದ ಶರಣ್ ಜೊತೆಗೆ ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದು ಮನಸ್ಸಿಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್ ಮಾತನಾಡಿ, ಸರ್ಕಾರದ ಅಕಾಡೆಮಿ, ಇಲಾಖೆಗಳಿಗಾಗಿ ನಾವೆಂದೂ ಸಾಂಕೇತಿಕ ಕಾರ್ಯಕ್ರಮ ಮಾಡದೆ, ಸಾಮಾಜಿಕ, ಕಳಕಳಿ ಬದ್ಧತೆಯಿಂದ ನಾಡಿನ‌ ನೂರಾರು ಮಹನೀಯರನ್ನು ಗೌರವಿಸಿದ, ನೂರಾರು ಕಲಾವಿದರಿಗೆ ವೇದಿಕೆ ಸೃಷ್ಟಿಸಿದ ಹೆಮ್ಮೆ ನಮ್ಮದು ಎಂದರು.


ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಆಧ್ಯಾತ್ಮಿಕ ಚಿಂತಕರಾದ ಪರಶುರಾಮರ ಮಠದ ಎಂ.ರಾಮಚಂದ್ರಪ್ಪ, ಶಿಲ್ಪಶ್ರೀ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಎಂ.ಶರಣ್ ರವರಿಗೆ ಸಂಸ್ಕೃತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ವಕೀಲರಾದ ಎಚ್.ಜಯರಾಂ, ಜಿಲ್ಲಾ ಪತ್ರ ಬರಹಗಾರ ಸಂಘದ ಪ್ರದಾನ ಕಾರ್ಯದರ್ಶಿ ಎಚ್.ಎನ್.ರಮೇಶ್, ಜೀವ ವಿಮಾ ನಿಗಮದ ನಿವೃತ್ತ ಆಡಳಿತಾಧಿಕಾರಿ ಮೋಹನ‌ಕಾಂತ ರಂಗದಳ, ಕ್ಯಾಸಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಧರ್, ನಗರಸಭಾ ಮಾಜಿ ಸದಸ್ಯ ಶಿವಶಂಕರ್, ವಕೀಲ ಎಸ್.ನಾಗರಾಜು, ಡಿ.ದೇವರಾಜ ಅರಸು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾದ ಎಚ್.ಸುರೇಶ್, ಗ್ರಾಪಂ ಮಾಜಿ ಸದಸ್ಯರಾದ ಕೂನಮುದ್ದನಹಳ್ಳಿ ರುದ್ರೇಶ್,ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಿ.ಎಂ.ಮಾದೇಗೌಡ, ಶ್ರೀ ವಾಸವಿ ವಿದ್ಯಾನಿಕೇತನ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್.ನಾಗೇಶ್, ಭಾರತ್ ವಿಕಾಸ್ ಪರಿಷತ್ತಿನ ಮಾಜಿ ಅಧ್ಯಕ್ಷರಾದ ರಾ.ಸಿ.ಬಸವರಾಜು, ರಾಮನಗರ ಜಿಲ್ಲಾ ಕಸಾಪ ಮಾಜಿ ಕಾರ್ಯದರ್ಶಿ ಕಾ.ಪ್ರಕಾಶ್, ರಂಗಭೂಮಿ ಕಲಾವಿದರಾದ ಶ್ಯಾನುಬೋಗನಹಳ್ಳಿ ಎಸ್ ರುದ್ರೇಶ್ ಉಪಸ್ಥಿತರಿದ್ದರು.

ಗಾಯಕರಾದ ಎಸ್.ರಘುನಾಥ್, ಮಂಡ್ಯ ರಾಘವೇಂದ್ರ, ಕೆಂಗಲ್ ವಿನಯ್ ಕುಮಾರ್, ವಿ.ಲಿಂಗರಾಜು, ಗೋಪಾಲ್ ಬೊಮ್ಮಚ್ಚನಹಳ್ಳಿ, ಸೌಜನ್ಯ ಹಾಗೂ ನೂಪುರ ಸಂಗೀತದ ಸಂಜಿತ್ , ಧನ್ಯಂತ್ , ಧೀಕ್ಷಿತ್ ಗೀತಗಾಯನ ನಡೆಸಿಕೊಟ್ಟರು.

6ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ ಸಂಸ್ಕೃತಿ ಉತ್ಸವ ಹಾಗೂ ಸಂಸ್ಕೃತಿ ಪುರಸ್ಕಾರ ಸಮಾರಂಭವನ್ನು ಅತಿಥಿಗಳು ಉದ್ಘಾಟಿಸಿದರು.