ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದಲ್ಲಿ ವಿಸ್ತೃತವಾಗಿ ಹರಡಿರುವ ಮರಗಳನ್ನು ಕಡಿದು ಅಲ್ಲಿ ಸರ್ಕಾರಿ ಕಟ್ಟಡಗಳ ಕಟ್ಟಲು ಅವಕಾಶ ಮಾಡಿಕೊಡುವುದಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ ಹಾಗೂ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮರ-ಗಿಡಗಳನ್ನು ಕಡಿದು ಕಟ್ಟಡಗಳ ನಿರ್ಮಿಸಲು ಮುಂದಾಗಿರುವ ಕ್ರಮ ವಿರೋಧಿಸಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ 200ಕ್ಕೂ ಹೆಚ್ಚು ಮರ-ಗಿಡಗಳನ್ನು ಕಡಿದು ಮಹಿಳಾ ಕಾಲೇಜು ಕಟ್ಟಡ ಹಾಗೂ ತೋಟಗಾರಿಕೆ ಇಲಾಖೆ ಆವರಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗಿಡ-ಮರಗಳ ಮಾರಣಹೋಮ ನಡೆಸಿ ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ಕಟ್ಟಡ ಕಟ್ಟಲು ಹೊರಟಿರುವುದನ್ನು ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಸಂಸ್ಥೆಗಳು ವಿರೋಧಿಸುತ್ತಿದ್ದಾರೆ. ಇದನ್ನು ಲೆಕ್ಕಿಸದೆ ಅಧಿಕಾರಿಗಳು ಮುಂದಡಿ ಇಟ್ಟಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿದೆ ಎಂದರು.
ಸರ್ಕಾರಿ ವಿಜ್ಞಾನ ಕಾಲೇಜು ಎದುರು ಮಹಿಳಾ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಆದೇಶಿಸಿ 20 ಕೋಟಿ ರು. ಗಳನ್ನು ಮಂಜೂರು ಮಾಡಿದೆ. ಆದರೆ ಹಣ ಇನ್ನೂ ಬಿಡುಗಡೆಯಾಗಿಲ್ಲ. ನಗರಸಭೆಗೆ ಸೇರಿದ ಜಾಗ ಎಂದು ತಡೆಹಿಡಿಯಲಾಗಿದೆ. ಉನ್ನತ ಶಿಕ್ಷಣ ಇಲಾಖೆಗೆ ಜಾಗವನ್ನು ಸೇರಿಸಿ ಮಹಿಳಾ ಕಾಲೇಜು ನಿರ್ಮಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಇಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರ ವಿಶ್ರಾಂತಿಗಾಗಿ ಲಾಂಜ್ ನಿರ್ಮಿಸಲು ನಿರ್ಣಯಿಸಲಾಗಿದೆ. ಕಾಲೇಜು ಕಟ್ಟಡ ಒಂದು ಕಡೆ ಮತ್ತೊಂದು ಕಡೆ ಲಾಂಜ್ ಇರಬಾರದೆಂಬ ನಿಯಮವಿದೆ. ಯಾರ ಮಾತಿಗೂ ಮನ್ನಣೆ ನೀಡದೆ ತಡೆಯಲು ಬಂದವರ ಮೇಲೆ ಕೇಸ್ ದಾಖಲಿಸಿ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಅಧಿಕಾರಿಗಳ ಈ ಹಠಮಾರಿ ಧೋರಣೆ ಏಕೆ ಎಂದು ಕೆ.ಎಸ್.ನವೀನ್ ಖಾರವಾಗಿ ಪ್ರಶ್ನಿಸಿದರು.ಸರ್ಕಾರಿ ವಿಜ್ಞಾನ ಕಾಲೇಜು ಎದುರಿನ ಆವಣದಲ್ಲಿರುವ ಮರ-ಗಿಡಗಳನ್ನು ಕಡಿದು ಪರಿಸರ ನಾಶ ಮಾಡುವುದರ ಬದಲು ವಿ.ಶೇಪ್‍ನಲ್ಲಿ ಕಟ್ಟಿ ಸ್ಟೇಡಿಯಂಗೆ ಹೋಗುವ ರಸ್ತೆಯ ಮೂಲೆಯಲ್ಲಿ ಮಹಿಳಾ ಕಾಲೇಜು ಕಟ್ಟಬಹುದಲ್ಲವೆ? ಅದೇ ರೀತಿ ತೋಟಗಾರಿಕೆ ಇಲಾಖೆ ಪಕ್ಕದಲ್ಲಿರುವ ಹಳೆಯ ಕ್ವಾಟ್ರಸ್‍ಗಳನ್ನು ಕೆಡವಿ ಪಕ್ಕದಲ್ಲೆ ಇರುವ ವಿಶಾಲವಾದ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ನೂತನ ಕಟ್ಟಡ ಕಟ್ಟಬಹುದಲ್ಲವೇ. ಇವೆಲ್ಲಾ ಬಿಟ್ಟು ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿರುವ ಆರು ಕಾಲು ಎಕರೆ ಜಾಗದ ಮೇಲೆ ಅಧಿಕಾರಿಗಳಿಗೆ ಏಕೆ ಕಣ್ಣು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಸಿರು ಪರಿಸರ ಹಾಳು ಮಾಡಿ ಮಹಿಳಾ ಕಾಲೇಜು ಕಟ್ಟುವ ಅಗತ್ಯವಿಲ್ಲವೆಂದು ಕಾಲೇಜಿನ ಪ್ರಾಂಶುಪಾಲರಿಗೂ ಹೇಳಿದ್ದೇನೆ. ಇರುವ ಉತ್ತಮ ವ್ಯವಸ್ಥೆಯನ್ನು ನಾಶಪಡಿಸಿ ಹೊಸ ಕಟ್ಟಡಗಳನ್ನು ಕಟ್ಟುವ ಬದಲು ಖಾಲಿ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿ ನಮ್ಮದೇನು ಅಭ್ಯಂತರವಿಲ್ಲ. ಜಿಲ್ಲೆಯಲ್ಲಿ ಶೇ.33ರಷ್ಟು ಅರಣ್ಯವಿರಬೇಕು. ಕೇವಲ ಶೇ.10ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇಂತಹ ಬರ ಪೀಡಿತ ಪ್ರದೇಶದಲ್ಲಿ ಇರುವ ಗಿಡ-ಮರಗಳನ್ನು ಕಡಿದರೆ ವಾತಾವರಣದಲ್ಲಿ ಏರುಪೇರಾಗಿ ತಾಪಮಾನ ಹೆಚ್ಚಿ ಸಕಲ ಜೀವರಾಶಿಗಳಿಗೂ ತೊಂದರೆಯಾಗುತ್ತದೆ ಎನ್ನುವುದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಪರಿಸರವನ್ನು ಉಳಿಸಬೇಕಿದೆ. ಇಲ್ಲವಾದಲ್ಲಿ ಬೀದಿ ಹೋರಾಟಕ್ಕೆ ಸಿದ್ದವೆಂದು ಎಚ್ಚರಿಸಿದರು.
ಪರಿಸರವಾದಿ ಎಚ್.ಎಸ್.ಕೆ.ಸ್ವಾಮಿ, ಕವಿತರೆಡ್ಡಿ, ಇನ್ನರ್ ವ್ಹೀಲ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ಚಂದ್ರಕಲಾ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನ್ಯಾಯವಾದಿ ದಿಲ್‍ಶಾದ್, ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ನಾಗರಾಜ್ ಬೇದ್ರೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಪದ್ಮಾವತಿ, ಮಂಜುನಾಥ್ ಕಳ್ಳಿಹಟ್ಟಿ, ವಕೀಲ ಸೈಯದ್ ಸ್ವಾಲೇಹ, ರೀನ ವೀರಭದ್ರಪ್ಪ, ಗಿರೀಶ್, ತೇಜಮೂರ್ತಿ, ಕೆ.ಆರ್.ರಘುನಾಥ್, ನಿವೃತ್ತ ಸಬ್ ಇನ್ಸ್‌ಪೆಕ್ಟರ್ ನಾಗರಾಜ್, ಎಂ.ಬಿ.ಜಯದೇವಮೂರ್ತಿ, ಶಿವರುದ್ರಪ್ಪ, ಕರಿಯಮ್ಮ, ಶಶಿಕಲಾ, ಕೆಂಚಮ್ಮ, ಎಪಿಜೆ ಅಬ್ದುಲ್ ಕಲಾಂ ಸಂಘದ ರೇಷ್ಮ, ಕೆ.ಕುಮಾರ್, ಜೀವೇಶ್ ಧರಣಿಯಲ್ಲಿ ಪಾಲ್ಗೊಂಡಿದ್ದರು.