ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ನಿರ್ಮಿತವಾಗುತ್ತಿರುವ ಸಭಾಭವನಕ್ಕೆ ಶಾಸಕ ವೀರೇಂದ್ರ ಪಪ್ಪಿ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವುದರ ಬಗ್ಗೆ ಹೆಮ್ಮಯಿಂದ ಹೇಳಿ, ಇಲ್ಲಿ ಸಿಗುವಂತಹ ಶಿಕ್ಷಣ ಎಲ್ಲಿಯೂ ಸಿಗುವುದಿಲ್ಲವೆಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.

ತಾಲೂಕಿನ ದೊಡ್ಡಸಿದ್ದವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಹಳೆ ವಿದ್ಯಾರ್ಥಿಗಳಿಂದ ನಿರ್ಮಿತವಾಗುತ್ತಿರುವ ಸಭಾಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳಲ್ಲಿ ಇದ್ದಾರೆ ಎಂಬುದನ್ನು ಮನನ ಮಾಡಿಕೊಳ್ಳಿ ಎಂದರು.

ಮಕ್ಕಳಿಗೆ ಮನೆಯಲ್ಲಿ ತಾಯಿಯೇ ಮೊದಲ ಶಿಕ್ಷಕಿ. ನಂತರದ ಜೀವನದ ವೃತ್ತಿಯಲ್ಲಿ ಶಿಕ್ಷಕರು ಅತ್ಯಂತ ಪ್ರಮುಖರಾಗಿದ್ದಾರೆ. ಶಿಕ್ಷಕರು ಅದೆಷ್ಟೋ ವಿದ್ಯಾರ್ಥಿಗಳಿಗೆ ಅಕ್ಷರ ದಾನ ಮಾಡುವುದರ ಜ್ಞಾನದ ಸಂಪತ್ತನ್ನು ಬಿತ್ತುತ್ತಿದ್ದಾರೆ. ಶಾಲಾ-ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳಿಗೆ ತಿದ್ದಿ-ಬುದ್ದಿ ಹೇಳಿ ಸನ್ಮಾರ್ಗದಡೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವಲ್ಲಿ ಸಾಕಷ್ಟು ಪಾತ್ರವನ್ನು ಶಿಕ್ಷಕರು ವಹಿಸಿದ್ದಾರೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ತೊಡಗಿಕೊಳ್ಳಬೇಕೆನ್ನುವುದು ಸಹ ಮನದಟ್ಟಾಗುವ ರೀತಿಯಲ್ಲಿ ಶಿಕ್ಷಕರು ಬೋಧಿಸುತ್ತಿದ್ದಾರೆ. ಇಂತಹ ಶಿಕ್ಷಕರ ಜೊತೆಗಿರುವೆ. ಶಾಲೆಗೆ ನಾಲ್ಕು ಕೊಠಡಿಗಳ ನಿರ್ಮಿಸಿಕೊಡುವೆ ಎಂದರು.

ದೊಡ್ಡಸಿದ್ದವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಗತ್ಯವಾಗಿ ಬೇಕಿರುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವರಾಜ್ ರೆಡ್ಡಿ, ನಗರ ಹಾಗು ಗ್ರಾಮಾಂತರ ಯೋಜನೆ ಇಲಾಖೆ ನಿವೃತ್ತ ನಿರ್ದೇಶಕರಾದ ಧನಂಜಯ ರೆಡ್ಡಿ, ಆರತಿ ಮಹಡಿ ಶಿವಮೂರ್ತಿ, ಲಿಂಗಬಸಪ್ಪ, ತಿಪ್ಪೇಸ್ವಾಮಿ, ಡಾ.ಸಿ.ಎಲ್.ಶಿವಮೂರ್ತಿ, ಗುರುಮೂರ್ತಿ, ಕೃಷ್ಣಮೂರ್ತಿ, ಶ್ರೀನಿವಾಸ ರೆಡ್ಡಿ, ಬಾಬುರೆಡ್ಡಿ, ವರಲಕ್ಷ್ಮಿ, ಮಲ್ಲಿಕಾರ್ಜುನ್, ಸುರೇಶ ರೆಡ್ಡಿ, ಇದ್ದರು.