ಜನ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆ

| Published : Jun 21 2024, 01:00 AM IST

ಸಾರಾಂಶ

ಕನಕಪುರ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ಒಂದೇ ಒಂದು ಜನಪರ ಯೋಜನೆಯನ್ನೂ ಜಾರಿಗೆ ತರದೇ ಜನ ಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಬಿಜೆಪಿ ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ. ಕುಮಾರ್ ಆರೋಪಿಸಿದರು.

ಕನಕಪುರ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ಒಂದೇ ಒಂದು ಜನಪರ ಯೋಜನೆಯನ್ನೂ ಜಾರಿಗೆ ತರದೇ ಜನ ಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಬಿಜೆಪಿ ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ. ಕುಮಾರ್ ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮೈತ್ರಿ ಪಕ್ಷದ ವತಿಯಿಂದ ನಗರದ ಚನ್ನಬಸಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಒಂದು ವರ್ಷದ ಹಿಂದೆ ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮಾನ್ಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಮೇಲೆ ಒಂದಲ್ಲಾ ಒಂದು ರೀತಿ ಬರೆ ಎಳೆದು ಅವರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ಆರೋಪಿಸಿದರು.

ತಾವು ರಾಜ್ಯದ ಜನರಿಗೆ ನೀಡಿರುವ ಸುಳ್ಳು ಭರವಸೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಇದರಿಂದ ಜನ ಸಾಮಾನ್ಯರ ದಿನಬಳಕೆ ವಸ್ತುಗಳು ಏರಿಕೆ ಆಗುವುದರಿಂದ ಕೂಡಲೇ ಏರಿಕೆ ಮಾಡಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಜನರಿಗೆ ಗ್ಯಾರಂಟಿಗಳು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಿಟ್ಟಿ ಭಾಗ್ಯಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಆಡಳಿತ ಯಂತ್ರ ನಿಂತ ನೀರಾಗಿದೆ.

ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ದಿವಾಳಿ ಯಾಗಿದ್ದು ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೆ ಖಾಲಿಯಾಗಿರುವ ಖಜಾನೆ ತುಂಬಲು ಶ್ರೀಸಾಮಾನ್ಯರ ಮೇಲೆ ತೆರಿಗೆ ಹಾಕುವುದರ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಯಿಂದ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗಲಿದ್ದು ಅವರ ಬದುಕಿನ ಮೇಲೆ ಬರೆ ಎಳೆದಂತಾಗಿದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಂತೂ ಹದಗೆಟ್ಟು ಹೋಗಿದೆ. ರೌಡಿಗಳು, ಅಕ್ರಮ ಚಟುವಟಿಕೆ ಗಳನ್ನು ನಡೆಸುವವರಿಗೆ ಭಯ ಇಲ್ಲದಂತಾಗಿದೆ. ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಕಲಿಯಲು ಹೊರಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗನಂದ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕನ್ನು ನಾಶ ಪಡಿಸುವಂತಹ ಕೆಲಸಕ್ಕೆ ಮುಂದಾಗಿದ್ದು ನಮ್ಮ ಐದು ಗ್ಯಾರಂಟಿಗಳಿಂದ ಜನರು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ ಎಂದು ಕೊಚ್ಚಿ ಕೊಳ್ಳುವ ಕಾಂಗ್ರೆಸ್ ನಾಯಕರು, ಕಂದಾಯ, ನೀರು, ಬಸ್, ಪಹಣಿ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲೂ ಶುಲ್ಕವನ್ನು ಹೆಚ್ಚಳ ಮಾಡಿರುವುದರಿಂದ ಮಧ್ಯಮ ವರ್ಗದ ಜನರ ಜೀವನವನ್ನು ನರಕಕ್ಕೆ ತಳ್ಳಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಜೆಡಿಎಸ್ ಮಹಿಳಾಧ್ಯಕ್ಷೆ ಶೋಭಾ, ಜೆಡಿಎಸ್ ಉಪಾಧ್ಯಕ್ಷ ತುಂಗಣಿ ರಾಮಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಮುದುವಾಡಿ ಕೆಂಚಪ್ಪ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಂಜುನಾಥ್ ಮುಖಂಡರಾದ ಶಿವಮುತ್ತು, ಕೃಷ್ಣಪ್ಪ, ರಾಜೇಶ್, ಮರೀಗೌಡ, ಕುಮಾರ್, ಸುನೀಲ್, ರಾಮಕೃಷ್ಣ, ಪ್ರಮೀಳಾ ಮೂರ್ತಿ, ಪವಿತ್ರಾ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಕೆ ಕೆ ಪಿ ಸುದ್ದಿ 01:ಕನಕಪುರದ ಚನ್ನಬಸಪ್ಪ ವೃತ್ತದ ಬಳಿ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ನಡೆಸಿದರು.