ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಸಿರುವುದನ್ನು ಹಿಂಪಡೆಯಬೇಕು, ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗೆ ಡೀಸೆಲ್ ಪೂರೈಸುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ ನೀಡಿದ ಭರವಸೆಯಂತೆ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿ ಮಾಡಿ, ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ರೀತಿ ರೈತ ವಿರೋಧಿ 3 ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಹೆಚ್ಚಳ ಮಾಡಿರುವ ರಸಗೊಬ್ಬರ ಬೆಲೆಯನ್ನು ಹಿಂಪಡೆದು ರಿಯಾಯ್ತಿ ದರದಲ್ಲಿ ಗೊಬ್ಬರ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸೇರಿದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಸಿರುವುದನ್ನು ಹಿಂಪಡೆಯಬೇಕು, ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗೆ ಡೀಸೆಲ್ ಪೂರೈಸುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ ನೀಡಿದ ಭರವಸೆಯಂತೆ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿ ಮಾಡಿ, ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ ರೀತಿ ರೈತ ವಿರೋಧಿ 3 ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಈ ವೇಳೆ ಕೆಪಿಆರ್‌ಎಸ್‌ನ ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿ, ರೈತರು ಕಳೆದ ವರ್ಷ ಹಿಂಗಾರು ಬೆಳೆ ಇಲ್ಲದ ಕಾರಣ ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ರೈತರ ಗೋಳು ಕೇಳುವುದು ಯಾರು ಎಂಬ ಪರಿಸ್ಥಿತಿ ರೈತರಿಗೆ ಉಂಟಾಗಿದೆ. ರೈತ ದೇಶದ ಬೆನ್ನೆಲಬು ಎಂದು ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತಾರೆ. ಚುನಾವಣೆ ನಂತರ ಯಾವುದೇ ರೈತರ ಬಗ್ಗೆ ಮಾತನಾಡುವುದಿಲ್ಲ. ನಾವು ರೈತರ ಮಗ, ನಾನು ಮಣ್ಣಿನ ಮಗ ಎಂದು ಸಾರಿ ಸಾರಿ ಹೇಳುತ್ತಾರೆ. ರೈತರಿಗೆ ರಸಗೊಬ್ಬರ ಬೆಲೆ ಏರಿಕೆ ಆಗಿರುವುದರಿಂದ ಬಹಳ ತೊಂದರೆಗಳು ಅನುಭವಿಸುವಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ದಿನ ಬಳಕೆ ವಸ್ತುಗಳು ಕೂಡ ಬೆಲೆ ಜಾಸ್ತಿಯಾಗಿ ಜನಸಾಮಾನ್ಯರ ಬದುಕು ಕಷ್ಟವಾಗಿದೆ. ರೈತರಿಗೆ ರಸಗೊಬ್ಬರಕ್ಕೆ ಜಂಟಿಯಾಗಿ ಇತರೆ ಕ್ರಿಮಿನಾಶಕ ಔಷದಿಗಳು ಗೊಬ್ಬರಗಳನ್ನು ದುಪ್ಪಟ್ಟು ಮಾಡಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಯಾಗಿದೆ. ಸಾಧನ ಸಮಾವೇಶಗಳು ಮಾಡುತ್ತೀರಿ ಸಣ್ಣ ಮತ್ತು ಮಧ್ಯಮ ರೈತರು ಉಳುಮೆ ಮಾಡುವುದೆ ದುಸ್ತರವಾಗಿದೆ. ತಾವು ರೈತರ ಮೇಲೆ ಕರುಣೆ ತೋರಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಲು ರಸಗೊಬ್ಬರಕ್ಕೆ ಬೆಲೆ ಕಡಿಮೆ ಮಾಡಿ ಜಂಟಿಯಾಗಿ ಕೊಡುವ ಇತರೆ ಔಷದಿಗಳನ್ನು ತೆಗೆದು ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಸರ್ಕಾರಗಳನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ, ಪದಾಧಿಕಾರಿಗಳಾದ ಡಿ.ಟಿ.ಮುನಿ ಸ್ವಾಮಿ, ಡಿ.ಎನ್. ಬಾಬು, ನರಸಿಂಹರೆಡ್ಡಿ, ಎಂ.ರಾಮಕೃಷ್ಣಪ್ಪ, ವೆಂಕಟರಮಣಪ್ಪ, ರಮಣ, ಕೃಷ್ಣಪ್ಪ, ಶ್ರೀನಿವಾ ಸರೆಡ್ಡಿ, ನಾರಾಯಣಪ್ಪ, ಕೇಶವಾರ ಶ್ರೀನಿವಾಸ ಮತ್ತಿತರರು ಇದ್ದರು.

ಸಿಕೆಬಿ-1 ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಪೆಟ್ರೋಲ್, ಡೀಸೆಲ್, ಗ್ಯಾಸ್ ರಸಗೊಬ್ಬರಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.