ಈ ವರ್ಷದ ಮಳೆಗಾಲದ ಅಂತ್ಯದೊಳಗೆ ತಾಲೂಕಿನ ೧೦೫ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಯಲಿದ್ದು ಈ ಎಲ್ಲ ಕೆರೆಗಳಲ್ಲಿ ಮೀನುಗಾರಿಕೆಗೆ ಸಾಕಷ್ಟು ಅವಕಾಶಗಳಿವೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಈ ವರ್ಷದ ಮಳೆಗಾಲದ ಅಂತ್ಯದೊಳಗೆ ತಾಲೂಕಿನ ೧೦೫ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಹರಿಯಲಿದ್ದು ಈ ಎಲ್ಲ ಕೆರೆಗಳಲ್ಲಿ ಮೀನುಗಾರಿಕೆಗೆ ಸಾಕಷ್ಟು ಅವಕಾಶಗಳಿವೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಮೀನುಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಆಯ್ಕೆಯಾದ ಮೀನುಗಾರ ಫಲಾನುಭವಿಗಳಿಗೆ ಮೀನುಗಾರಿಕಾ ಸಲಕರಣೆ ಹಾಗೂ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಮೀನುಗಾರಿಕೆ, ಮೀನು ಸಾಕಾಣಿಕೆ ಬಗ್ಗೆ ಅರಿವು ಕಡಿಮೆ ಇದೆ. ಇದು ಆರ್ಥಿಕವಾಗಿ ಸಾಕಷ್ಟು ಸಂಪಾದನೆಗೆ ಅವಕಾಶವಿರುವ ಉದ್ದಿಮೆ. ಮೀನುಗಾರಿಕೆಯಲ್ಲಿ ತೊಡಗಿರುವ ಸೂರಿಲ್ಲದವರಿಗೆ ವಿಶೇಷ ಯೋಜನೆಯಡಿ ೫೦ ಜನರಿಗೆ ಸರ್ಕಾರದಿಂದ ಮನೆ ಮಂಜೂರಾಗಿದ್ದು ಅದರಲ್ಲಿ ೪೦ಜನ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಇನ್ನೂ ೧೦ಜನ ಫಲಾನುಭವಿಗಳನ್ನು ಹುಡುಕಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಈಗ ಕೆರೆಗಳ ಮೀನುಸಾಕಾಣಿಕೆ ಹರಾಜು ಪ್ರಕ್ರಿಯೆಯನ್ನು ಇ-ಟೆಂಟರ್ ಮೂಲಕ ನಡೆಸಲಾಗುತ್ತಿದ್ದು ಪಾರದರ್ಶಕವಾಗಿ ಇರುತ್ತದೆ. ಮೀನು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡವರಿಗೆ ಇಲಾಖೆಯಿಂದ ಅನೇಕ ಸವಲತ್ತುಗಳು ದೊರೆಯುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರುಮೀನುಗಾರಿಕಾ ಉಪನಿರ್ದೇಶಕ ಎಮ್.ಎಚ್.ನಂಜುಂಡಪ್ಪ ಮಾತನಾಡಿ ತಾಲೂಕಿನಲ್ಲಿ ಮೀನುಗಾರಿಕೆಗೆ ಬಹಳ ಅವಕಾಶಗಳಿವೆ. ಜಿಲ್ಲೆಯ ೧೦ ತಾಲೂಕುಗಳಲ್ಲಿ ಹೇಮಾವತಿ ನಾಲಾ ವಲಯದಡಿ ಬರುವ ತಿಪಟೂರು ತಾಲೂಕಿಗೆ ಇಲಾಖೆಯಿಂದ ಬಹಳಷ್ಟು ಅವಕಾಶಗಳಿವೆ. ಸರಕಾರದಿಂದ ದೊರೆಯುವ ಅನೇಕ ಸವಲತ್ತುಗಳು, ಸಹಾಯಧನಗಳ ಬಗ್ಗೆ ಮೀನುಗಾರಿಕೆ ಬಗ್ಗೆ ಮಾಹಿತಿಯನ್ನು ನಮ್ಮ ಮೀನುಗಾರಿಕಾ ಕಚೇರಿಯಲ್ಲಿ ಪಡೆದುಕೊಂಡು ತಾಲೂಕಿನ ಹೆಚ್ಚು ಜನರು ಮೀನು ಸಾಕಾಣಿಕೆ ಕೆಲಸಗಳಲ್ಲಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.೨೦೨೫-೨೬ನೇ ಸಾಲಿನಲ್ಲಿ ತಿಪಟೂರು ತಾಲೂಕಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿಯ ೨೦ಜನರಿಗೆ ಹಾಗೂ ಪರಿಶಿಷ್ಠ ಪಂಗಡದ ೧೦ ಹಾಗೂ ಸಾಮಾನ್ಯ ವರ್ಗದ ೧೧ಜನ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಅದೇ ರೀತಿ ಇಬ್ಬರು ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಮತ್ತು ಇಬ್ಬರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಿದರು. ರಾಜ್ಯ ವಲಯದಿಂದ ೫ಜನರು, ಟಿಎಸ್‌ಪಿ ಯೋಜನೆಯಡಿ ೧೦ ಎಸ್‌ಸಿಪಿ ಯೋಜನೆಯಡಿ ೨೦ ಮತ್ಸ್ಯವಾಹಿನಿ ಯೋಜನೆಯಡಿ ನಾಲ್ವರು ಫಲಾನುಭವಿಗಳು ಸೇರಿ ಒಟ್ಟು ೪೫ ಜನ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಮೀನುಗಾರಿಕಾ ನಿರ್ದೇಶಕ ಮೋಹನ್‌ಕುಮಾರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ನ್ಯಾಕೇನಹಳ್ಳಿ, ಮುಖಂಡರಾದ ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.